ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಗಾಯಕ ಅರಿಜಿತ್ ಸಿಂಗ್ ಪ್ಲೇಬ್ಯಾಕ್ ಹಾಡುಗಾರಿಕೆಗೆ ವಿರಾಮ ಘೋಷಿಸಿದ ಬಳಿಕ ಅಭಿಮಾನಿಗಳು ಅಚ್ಚರಿಗೊಂಡಿದ್ದರು. ಇದೀಗ ಅವರು ಹೊಸ ದಾರಿಗೆ ಹೆಜ್ಜೆ ಇಡುವ ಸಾಧ್ಯತೆ ಇದೆ ಎಂಬ ವರದಿಗಳು ಹೊರಬಿದ್ದಿವೆ. ಸಂಗೀತದಿಂದ ಸ್ವಲ್ಪ ದೂರ ಸರಿದು, ರಾಜಕೀಯ ಜೀವನ ಆರಂಭಿಸುವ ಬಗ್ಗೆ ಅರಿಜಿತ್ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಖಾಸಗಿ ವಾಹಿನಿಗಳ ವರದಿಯ ಪ್ರಕಾರ, ಅರಿಜಿತ್ ಸಿಂಗ್ ತಮ್ಮದೇ ರಾಜಕೀಯ ಪಕ್ಷ ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚುನಾವಣೆಯಲ್ಲೂ ಸ್ಪರ್ಧಿಸುವ ಬಗ್ಗೆ ಆಲೋಚನೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ ತಕ್ಷಣವೇ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಆರಂಭದಲ್ಲಿ ಸ್ಥಳೀಯ ಮಟ್ಟದ ರಾಜಕೀಯ ಚಟುವಟಿಕೆಗಳ ಮೂಲಕ ಪ್ರವೇಶಿಸುವ ಯೋಚನೆ ಇದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಿಯಾಗಂಜ್ ಮೂಲದವರಾದ ಅರಿಜಿತ್ ಸಿಂಗ್, ಈ ಕುರಿತು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.



