ಹೊಸದಿಗಂತ ಡಿಜಿಟಲ್ ಡೆಸ್ಕ್
ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ ಮಲೆ ಮಹದೇಶ್ವರ ಬೆಟ್ಟದ ಭೂಪ್ರದೇಶ ಪ್ರವೇಶಿಸದಂತೆ ಹನೂರು ತಹಸೀಲ್ದಾರ್ ಚೈತ್ರಾ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಸಾಲೂರು ಮಠದಲ್ಲಿ ಆಯೋಜಿಸಲಾಗಿದ್ದ ಪಟ್ಟದ ಮಹದೇವಸ್ವಾಮೀಜಿಯವರ 32ನೇ ಸಂಸ್ಮರಣೋತ್ಸವದಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದರು. ಆದರೆ, ಈ ನಡೆಗೆ ಸುಳ್ವಾಡಿ ದುರಂತದ ಸಂತ್ರಸ್ತರು ಹಾಗೂ ವಿವಿಧ ದಲಿತ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಆರೋಪಿ ಮಠದ ಆವರಣ ಪ್ರವೇಶಿಸಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಂತ್ರಸ್ತರು ಎಚ್ಚರಿಕೆ ನೀಡಿದ್ದರು.
ಇಮ್ಮಡಿ ಮಹದೇವಸ್ವಾಮಿ ಭಾಗವಹಿಸುವುದರಿಂದ ಸ್ಥಳದಲ್ಲಿ ಗಲಭೆ ಅಥವಾ ಸಾರ್ವಜನಿಕ ಶಾಂತಿಗೆ ಧಕ್ಕೆ ಉಂಟಾಗುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಸಾಲೂರು ಮಠದ ಆವರಣಕ್ಕೆ ಆರೋಪಿಯ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಪೊನ್ನಾಚಿ ಮಹದೇವಸ್ವಾಮಿ ಅವರು ಆಡಳಿತ ಮಂಡಳಿಗೆ ಮನವಿ ಮಾಡಿದ್ದರು.
ಈ ಎಲ್ಲ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ ತಹಸೀಲ್ದಾರ್ ಅವರು, ಇಂದಿನಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ಮಹದೇಶ್ವರ ಬೆಟ್ಟಕ್ಕೆ ಇಮ್ಮಡಿ ಮಹದೇವಸ್ವಾಮಿ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದ್ದಾರೆ.



