ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ತಿದ್ದುಪಡಿ ಮಾಡಬೇಕೆಂದು ಆದೇಶ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಮೂಲಕ ಇಂದು ಗೃಹ ಕಾರ್ಮಿಕರಿಗೆ ಸಮಗ್ರ ಕಾನೂನು ಚೌಕಟ್ಟು ರೂಪಿಸುವುದು ಹಾಗೂ ಕನಿಷ್ಠ ವೇತನವನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು , ಗೃಹ ಕಾರ್ಮಿಕರ ಕನಿಷ್ಠ ವೇತನ ಹಾಗೂ ಅವರ ಹಕ್ಕುಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರಗಳೇ ತೆಗೆದುಕೊಳ್ಳುವುದ ಸೂಕ್ತ ಮತ್ತು ಸಂವಿಧಾನಾತ್ಮಕವಾಗಿ ಸರಿಯಾದ ಕ್ರಮವೆಂದು ಅಭಿಪ್ರಾಯಪಟ್ಟಿದೆ.
ಕಡ್ಡಾಯ ಕನಿಷ್ಠ ವೇತನ ನಿಗದಿಪಡಿಸುವುದರಿಂದ ಮನೆ ಮಾಲಕರು ಕಾನೂನಾತ್ಮಕ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ ಇದೆ. ಕಾರ್ಮಿಕ ಸಂಘಟನೆಗಳು ಪ್ರತಿಯೊಂದು ಮನೆಯ ಮೇಲೂ ಮೊಕದ್ದಮೆ ಹೂಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ಗೃಹ ಕಾರ್ಮಿಕರನ್ನು ನೇಮಿಸಿಕೊಳ್ಳಲು ಸಾಮಾನ್ಯ ಜನರು ಹಿಂಜರಿಯುವಂತಹ ಸ್ಥಿತಿ ಉಂಟಾಗಬಹುದು ಎಂಬ ನ್ಯಾಯಾಲಯ ಹೇಳಿದೆ. .
ಕಾನೂನು ತಿದ್ದುಪಡಿ ಅಥವಾ ಹೊಸ ಕಾನೂನು ರೂಪಿಸುವಂತಹ ವಿಷಯಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪಕ್ಕೆ ಮಿತಿ ಇದ್ದು, ಈ ರೀತಿಯ ಬೇಡಿಕೆಗಳಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಗಳು ಮತ್ತು ಶಾಸನ ಸಭೆಗಳೇ ಸೂಕ್ತ ವೇದಿಕೆಯಾಗಿವೆ ಎಂದು ಪೀಠ ತಿಳಿಸಿದೆ. ಆದ್ದರಿಂದ ಅರ್ಜಿದಾರರು ತಮ್ಮ ಬೇಡಿಕೆಗಳಿಗಾಗಿ ಸಂಬಂಧಪಟ್ಟ ರಾಜ್ಯ ಅಧಿಕಾರಿಗಳನ್ನು ಸಂಪರ್ಕಿಸುವುದು ಉತ್ತಮ ಮಾರ್ಗವೆಂದು ನ್ಯಾಯಾಲಯ ಸಲಹೆ ನೀಡಿದೆ.
ಅರ್ಜಿಯಲ್ಲಿ ಗೃಹ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಸಂವಿಧಾನದ ವಿಧಿ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಹಾಗೂ ವಿಧಿ 23 (ಬಲವಂತದ ಶ್ರಮ ವಿರೋಧ)ಗಳ ಅಡಿಯಲ್ಲಿ ಮೂಲಭೂತ ಹಕ್ಕಾಗಿಯಾಗಿ ಘೋಷಿಸಬೇಕೆಂದು ಮನವಿ ಮಾಡಲಾಗಿತ್ತು. ಜತೆಗೆ ಏಷ್ಯಾದ ಕೆಲವು ದೇಶಗಳಲ್ಲಿ ವಿಶೇಷವಾಗಿ ಸಿಂಗಾಪುರದಲ್ಲಿ, ಗೃಹ ಕಾರ್ಮಿಕರಿಗೆ ರಜೆ, ಕೆಲಸದ ಸಮಯ ಮತ್ತು ಇತರೆ ಸೌಲಭ್ಯಗಳನ್ನು ಕಾನೂನಿನ ಮೂಲಕ ಖಾತರಿಪಡಿಸದೆ ಅವರನ್ನು ನೇಮಿಸಲು ಸಾಧ್ಯವಿಲ್ಲ ಎಂಬುದನ್ನು ಉದಾಹರಣೆಯಾಗಿ ನ್ಯಾಯಾಲಯದ ಗಮನಕ್ಕೆ ತರಲಾಯಿತು.



