Thursday, January 29, 2026
Thursday, January 29, 2026
spot_img

ಜಲ್‌ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯ ಮಧ್ಯಪ್ರವೇಶಿಸಲಿ: ಕಾರಜೋಳ

ಹೊಸದಿಗಂತ ವರದಿ ಚಿತ್ರದುರ್ಗ:

ಬಹು ಮಹತ್ವಾಕಾಂಕ್ಷೆಯ ಜಲ್ ಜೀವನ್ ಮಿಷನ್ ಯೋಜನೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಇಚ್ಚಾ ಶಕ್ತಿಯಕೊರತೆಯ ಕಾರಣದಿಂದ ಸಮಪರ್ಕಪವಾಗಿ ಅನುಷ್ಟಾನವಾಗಿಲ್ಲ. ಅದರಲ್ಲೂ ನನ್ನ ಮತ ಕ್ಷೇತ್ರವಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯೋಜನೆಯ ಅನುಷ್ಟಾನದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯ ಮಧ್ಯ ಪ್ರವೇಶ ಮಾಡಬೇಕೆಂದು ಲೋಕಸs ಅಧಿವೇಶನದಲ್ಲಿ ಸಂಸದ ಗೋವಿಂದ ಕಾರಜೋಳ ಅವರು ಪ್ರಸ್ತಾಪಿಸಿದರು.

ಸದನದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮೀಣ ಮನೆಗೂ ಕೈಗೆಟಕುವ ಸೇವಾ ವಿತರಣಾ ಶುಲ್ಕದಲ್ಲಿ ನಿಯಮಿತ ಮತ್ತು ದೀರ್ಘಾವಧಿಯ ಆಧಾರದ ಮೇಲೆ ಗುಣಮಟ್ಟದ ಕುಡಿಯುವ ನೀರು ಪೂರೈಕೆ ಮಾಡಬೇಕು ಎನ್ನುವ ಘನ ಉದ್ದೇಶದೊಂದಿಗೆ ಜಲ್ ಜೀವನ್ ಮಿಷನ್ ಯೋಜನೆಯನ್ನು ಮೋದಿಜಿ ನೇತೃತ್ವದ ನಮ್ಮ ಸರ್ಕಾರ ೨೦೧೯ ರಲ್ಲಿ ಜಾರಿಗೆ ತಂದಿದೆ. ಪ್ರತಿಯೊಂದು ಗ್ರಾಮದಲ್ಲಿ ಮನೆಗಳಿಗೆ, ಅಂಗನವಾಡಿ ಕಟ್ಟಡಗಳಿಗೆ, ಆಸ್ಪತ್ರೆಗಳಿಗೆ, ಶಾಲೆಗಳಿಗೆ, ಗ್ರಾಮ ಪಂಚಾಯತಿ ಕಛೇರಿಗಳಿಗೆ, ಸಮುದಾಯ ಭವನಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಮಾಡುವುದು ಈ ಯೋಜನೆಯ ಮೂಲ ಉದ್ದೇಶ.

ಕರ್ನಾಟಕದಲ್ಲಿಒಟ್ಟು ೧,೦೧,೩೦,೭೦೨ ಕುಟುಂಬಗಳಿವೆ. ಇದರಲ್ಲಿ ಈಗಾಗಲೇ ೮೬,೮೩,೦೮೯ ಕುಟುಂಬಗಳಿಗೆ ನಲ್ಲಿ ಮೂಲಕ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಕರ್ನಾಟಕದ ೩೧ ಜಿಲ್ಲೆಗಳ ೫೯೯೨ ಗ್ರಾಮ ಪಂಚಾಯತಿಗಳಲ್ಲಿ ಈ ದಿನದವರೆಗೆ ೯೫೫ ಗ್ರಾ.ಪಂ.ಗಳು ಹರ್‌ಘರ್‌ಜಲ್ ಘೋಷಣೆಗೆ ಪ್ರಸ್ತಾವನೆ ಸಲ್ಲಿಸಿವೆ. ಅದರಲ್ಲಿ ೫೩೮ ಗ್ರಾ.ಪಂ.ಗಳು ಹರ್‌ಘರ್‌ಜಲ್ ಎಂದು ಘೋಷಣೆಯಾಗಿವೆ. ಒಟ್ಟಾರೆ ಕರ್ನಾಟಕದ ೨೬,೫೯೧ ಗ್ರಾಮಗಳಲ್ಲಿ ಕೇವಲ ೫೮೦೩ ಗ್ರಾಮಗಳು ಮಾತ್ರ ಹರ್‌ಘರ್‌ಜಲ್ ಎಂದು ಘೋಷಣೆಯಾಗಿವೆ.

ನಾನು ನಿಮಗೆ ವಿನಂತಿ ಮಾಡುವುದೇನೆಂದರೆ, ಯೋಜನೆಯ ಉದ್ದೇಶ ಈಡೇರಬೇಕು. ಅನುದಾನ ಸದ್ಬಳಕೆಯಾಗಬೇಕು. ಗ್ರಾಮೀಣ ಭಾಗದ ಪ್ರತಿಯೊಂದು ಕುಟುಂಬಗಳಿಗೂ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆಯಾಗಬೇಕು. ಈ ಹಿನ್ನೆಲೆಯಲ್ಲಿ ಜಲಶಕ್ತಿ ಸಚಿವಾಲಯ ಮಧ್ಯ ಪ್ರವೇಶ ಮಾಡಿ ಕರ್ನಾಟಕ ರಾಜ್ಯದಲ್ಲಿ ಅನುಷ್ಟಾನಗೊಂಡಿರುವ ಹಾಗೂ ಅನುಷ್ಟಾನಗೊಳ್ಳುತ್ತಿರುವ ಜಲ್‌ಜೀವನ್ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಉಸ್ತುವಾರಿ ಮಾಡಬೇಕು. ಕಳಪೆ ಕಾಮಗಾರಿ ಮಾಡಿರುವ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಗುರಿಪಡಿಸಬೇಕೆಂದು ವಿನಂತಿಸುತ್ತೇನೆ ಎಂದು ಲೋಕಸಭಾಅಧ್ಯಕ್ಷರ ಮೂಲಕ ಜಲಶಕ್ತಿ ಸಚಿವರ ಗಮನ ಸೆಳೆದರು.

ಸಂಸದರ ಪ್ರಶ್ನೆಗೆ ಉತ್ತರಿಸಿದ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್, ನೀರಿಗೆ ಸಂಬಂಧಿಸಿದ್ದು ರಾಜ್ಯ ಸರ್ಕಾರದ ಪರ್ಯಾಲೋಚನೆಗೆ ಬರುವ ವಿಷಯವಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರ ಒದಗಿಸಿರುವ ಮಾಹಿತಿಯ ಪ್ರಕಾರ ೧೬೯ ದೂರುಗಳು ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಬಂದಿವೆ. ಈ ಎಲ್ಲಾ ದೂರುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ. ಮಾನ್ಯ ಸಂಸದರು ಚಿತ್ರದುರ್ಗ ಜಿಲ್ಲೆಯಲ್ಲಿ ಯೋಜನೆ ಸಮರ್ಪಕವಾಗಿ ಅನುಷ್ಟಾನವಾಗಿಲ್ಲ ಎನ್ನುವ ವಿಷಯವನ್ನು ಸದನದಲ್ಲಿ ಹಾಗೂ ನನಗೆ ಈಗಾಗಲೇ ಪತ್ರಗಳನ್ನು ಬರೆದು ತಿಳಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಯೋಜನೆಯಲ್ಲಿ ಲೋಪವಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ತಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !