ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಎಡರಂಗ ಸರಕಾರದ ಕೊನೆಯ ಹಾಗೂ 2026-27ನೇ ಹಣಕಾಸು ವರ್ಷದ ಮುಂಗಪತ್ರವನ್ನು ಗುರುವಾರ ರಾಜ್ಯ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ವಿಧಾನಸಭೆಯಲ್ಲಿ ಮಂಡಿಸಿದರು. ಇದು ಅವರು ಮಂಡಿಸುವ 6ನೇ ಬಜೆಟ್ ಆಗಿದೆ. ನಿರೀಕ್ಷೆಯಂತೆಯೇ ವಿವಿಧ ವಲಯಗಳಿಗೆ ಹೆಚ್ಚಿನ ಆದ್ಯತೆಯನ್ನು ಈ ಬಜೆಟ್‌ನಲ್ಲಿ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಆರ್ಥಿಕ ವರ್ಷದಲ್ಲಿ ಕಲ್ಯಾಣ ಪಿಂಚಣಿ ವಿತರಣೆಗಾಗಿ 14500 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ತಿಂಗಳ ವೇತನದಲ್ಲಿ ತಲಾ 1000 ರೂ.ನಂತೆ ಹಾಗೂ ಸಹಾಯಕಿಯರಿಗೆ ಗೌರವಧನ 500ರೂ.ನಂತೆ ಹೆಚ್ಚಿಸಲಾಗುವುದು.
ಸ್ಥಳೀಯಾಡಳಿತ ಸಂಸ್ಥೆಗಳ ಜನ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಿಸಲಾಗುವುದು. ಜನ ಪ್ರತಿನಿಧಿಗಳ ಕ್ಷೇಮಕ್ಕಾಗಿ ಕಲ್ಯಾಣ ನಿಧಿ ಯೋಜನೆ ಆರಂಭಿಸಲಾಗುವುದು. ಘನ ತ್ಯಾಜ್ಯಗಳ ಸಂಸ್ಕರಣೆಗಾಗಿ 160 ಕೋಟಿ ರೂ. ಮೀಸಲಿರಿಸಲಾಗುವುದು.
ರಕ್ಷಣಾ ಸಂಶೋಧನಾ ಹಬ್‌ಗೆ 50 ಕೋಟಿ ರೂ., ರ್‍ಯಾಪಿಡ್ ಅರ್ಥ್ ಕಾರಿಡಾರ್‌ಗೆ 100 ಕೋಟಿ ರೂ., ಎಂ.ಸಿ.ರಸ್ತೆ ಅಭಿವೃದ್ಧಿಗಾಗಿ 5217 ಕೋಟಿ ರೂ., ಜಾಗತಿಕ ಗುಣಮಟ್ಟದ ಶಾಲೆಗಳನ್ನು ಸ್ಥಾಪಿಸಲು 10 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ.
ಶಾಲಾ ಅಡುಗೆ ಕಾರ್ಮಿಕರ ದಿನವೇತನದಲ್ಲಿ ತಲಾ 25ರೂ.ನಂತೆ ಹೆಚ್ಚಿಸಲಾಗುವುದು. ಪ್ರೀ ಪ್ರೈಮರಿ ಶಾಲಾ ಅಧ್ಯಾಪಕ ಹಾಗೂ ಸಾಕ್ಷರತಾ ಪ್ರೇರಕ್‌ಗಳ ತಿಂಗಳ ವೇತನದಲ್ಲಿ ತಲಾ 1000 ರೂ.ನಂತೆ ಹೆಚ್ಚಿಸಲಾಗುವುದು.
1ನೇ ತರಗತಿಯಿಂದ 12ನೇ ತರಗತಿ ತನಕ ವಿದ್ಯಾರ್ಥಿಗಳಿಗೆ ಅಪಘಾತ ವಿಮೆ ಯೋಜನೆಯನ್ನು ಜಾರಿಗೊಳಿಸಲಾಗುವುದು. ಅಪಘಾತಕ್ಕೊಳಗಾದವರಿಗೆ ಚಿಕಿತ್ಸೆಗಾಗಿ ಹೊಸ ಯೋಜನೆ ಆರಂಭಿಸಲಾಗುವುದು. ನೇಟಿವಿಟಿ ಕಾರ್ಡ್‌ಗಾಗಿ 20 ಕೋಟಿ ರೂ., ಪತ್ರಕರ್ತ ಪಿಂಚಣಿ ತಿಂಗಳಿಗೆ 1500 ರೂ. ಹೆಚ್ಚಳ, ಗ್ರಂಥಪಾಲಕರ ಮಾಸಿಕ ಭತ್ಯೆ 1000 ರೂ. ಆಗಿ ಹೆಚ್ಚಳ, ಜಿಲ್ಲಾಸ್ಪತ್ರೆಗಳಲ್ಲಿ ಮೆನೋಪಾಸ್ ಚಿಕಿತ್ಸಾಲಯಗಳನ್ನು ಸ್ಥಾಪಿಸಲು 3 ಕೋಟಿ ರೂ. ಮೀಸಲಿರಿಸಲಾಗಿದೆ.
ಕೇರಾ ಅಭಿವೃದ್ಧಿಗೆ 100 ಕೋಟಿ ರೂ.ಗಳ ಡೈರಿ ಅಭಿವೃದ್ಧಿಗೆ 126 ಕೋಟಿ ರೂ.ಗಳು ಮತ್ತು ಮಾನವ – ವನ್ಯಜೀವಿ ಸಂಘರ್ಷವನ್ನು ತಡೆಯಲು 100 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ. ಕಾರುಣ್ಯ ಯೋಜನೆಯ ವ್ಯಾಪ್ತಿಗೆ ಒಳಪಡದವರಿಗೆ ವಿಶೇಷ ಆರೋಗ್ಯ ಯೋಜನೆಯನ್ನು ಒದಗಿಸಲಾಗಿದೆ.
ರಾಜ್ಯದ ಆಟೋ ಸ್ಟ್ಯಾಂಡ್‌ಗಳನ್ನು ಸ್ಮಾರ್ಟ್ ಮೈಕ್ರೋ ಹಬ್‌ಗಳನ್ನಾಗಿ ಪರಿವರ್ತಿಸಲಾಗುವುದು. ರಾಜ್ಯದ ಪ್ರಧಾನ ಕೇಂದ್ರಗಳಲ್ಲಿ ಕೇರಳ ಕಲಾರೂಪ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ನ್ಯೂ ನಾರ್ಮಲ್ ಕೇರಳ ನಿರ್ಮಾಣ ಸರಕಾರದ ಗುರಿಯಾಗಿದೆ. ಮಹಿಳಾ ಸುರಕ್ಷಾ ಪಿಂಚಣಿಗಾಗಿ ಬಜೆಟ್‌ನಲ್ಲಿ 3820 ಕೋಟಿ ರೂಪಾಯಿ ಮೀಸಲಿರಿಸಲಾಗುವುದು. ಕೇರಳ ಪೇಪರ್ ಕಂಪೆನಿಗೆ 15 ಕೋಟಿ ರೂ., ಗೋಡಂಬಿ ಉದ್ಯಮಕ್ಕೆ 60 ಕೋಟಿ ರೂ., ಪ್ರವಾಸಿ ಕೈಗಾರಿಕಾ ಉದ್ಯಾನವನಕ್ಕೆ 20 ಕೋಟಿ ರೂ., ಕೆ–ನ್‌ಗೆ 112 ಕೋಟಿ ರೂ., ಶಬರಿಮಲೆ ಮಾಸ್ಟರ್ ಪ್ಲಾನ್‌ಗೆ 30 ಕೋಟಿ ರೂ. ಮತ್ತು ಕ್ಲೀನ್ ಪಂಪಾಗೆ 30 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಆಯೋಗ ಘೋಷಣೆ; ಡಿಎ ಬಾಕಿ ಶೀಘ್ರ ಇತ್ಯರ್ಥ; ಏಪ್ರಿಲ್ ನಿಂದ ಖಚಿತ ಪಿಂಚಣಿ ಬಜೆಟ್‌ನಲ್ಲಿ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಖಚಿತ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡಲಾಗಿದೆ.
ನೌಕರರ ವೇತನ ಪರಿಷ್ಕರಣೆಗೆ ಹೊಸ ಆಯೋಗವನ್ನು ಘೋಷಿಸಲಾಗಿದೆ. ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಆಯೋಗಕ್ಕೆ ಸೂಚಿಸಲಾಗಿದೆ. ನೌಕರರ ಡಿಎ ಬಾಕಿಯನ್ನು ಪೂರ್ಣವಾಗಿ ಪಾವತಿಸಲಾಗುವುದು. ಇದರಲ್ಲಿ ಒಂದು ಕಂತನ್ನು ಫೆಬ್ರವರಿ ತಿಂಗಳ ವೇತನದೊಂದಿಗೆ ಮತ್ತು ಉಳಿದ ಕಂತುಗಳನ್ನು ಮಾರ್ಚ್ ತಿಂಗಳ ವೇತನದೊಂದಿಗೆ ವಿತರಿಸಲಾಗುವುದು. ಏಪ್ರಿಲ್ ತಿಂಗಳಿನಿಂದ ರಾಜ್ಯವು ಖಚಿತ ಪಿಂಚಣಿ ವ್ಯವಸ್ಥೆಗೆ ಜಾರಿಗೆ ಬರಲಿದೆ.
ಕಾಸರಗೋಡು ಅಭಿವೃದ್ಧಿಗೆ 80 ಕೋಟಿ ರೂ.
ಕಾಸರಗೋಡು ಜಿಲ್ಲೆಯ ಸಮಗ್ರ ಪ್ರಗತಿಯ ಗುರಿಯೊಂದಿಗೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ಗೆ 80 ಕೋಟಿ ರೂ. ಮೀಸಲಿರಿಸಲಾಗಿದೆ. ರಾಜ್ಯ ಬಜೆಟ್ ಜಿಲ್ಲೆಯ ಅಭಿವೃದ್ಧಿಗೆ ಪ್ರಮುಖ ಘೋಷಣೆಗಳನ್ನು ಒಳಗೊಂಡಿವೆ.
ಎಂಡೋಸಲಾನ್ ಸಂತ್ರಸ್ತರಿಗೆ ನೆರವು, ಹೊಸ ನರ್ಸಿಂಗ್ ಕಾಲೇಜು ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಜಿಲ್ಲೆಗೆ ಬಜೆಟ್‌ನಲ್ಲಿ ಹೊಸ ಸರಕಾರಿ ನರ್ಸಿಂಗ್ ಕಾಲೇಜ್‌ನ್ನು ಘೋಷಿಸಲಾಗಿದೆ. ಇಡುಕ್ಕಿ, ವಯನಾಡ್, ಪಾಲಕ್ಕಾಡ್ ಮತ್ತು ಪಟ್ಟಣಂತಿಟ್ಟ ಜಿಲ್ಲೆಗಳ ಜೊತೆಗೆ ಕಾಸರಗೋಡಿಗೆ ಹೊಸ ನರ್ಸಿಂಗ್ ಕಾಲೇಜನ್ನು ಹಂಚಿಕೆ ಮಾಡಲಾಗಿದೆ.
ಎಂಡೋಸಲಾನ್ ಸಂತ್ರಸ್ತರ ಕಲ್ಯಾಣಕ್ಕಾಗಿ 17 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‌ನ್ನು ನಿಗದಿಪಡಿಸಲಾಗಿದೆ. ಇದರ ಜೊತೆಗೆ ಎಂಡೋಸಲಾನ್ ಸಂತ್ರಸ್ತರು ಮತ್ತು ಇತರರಿಗಾಗಿ ಉದ್ದೇಶಿಸಲಾದ ಸಮಗ್ರ ಪುನರ್ವಸತಿ ಗ್ರಾಮಗಳ ಯೋಜನೆಗೆ 10 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಜಿಲ್ಲೆಯ ಕೈಗಾರಿಕಾ ಉದ್ಯಾನವನಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 2.50 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
ಕರಾವಳಿ ಅಭಿವೃದ್ಧಿಯ ಅಂಗವಾಗಿ ಚೆರುವತ್ತೂರು – ನೀಲೇಶ್ವರ, ಕಾಸರಗೋಡು ಮತ್ತು ಮಂಜೇಶ್ವರ ಕಿರು ಬಂದರುಗಳ ಮೂಲಸೌಕರ್ಯ ಅಭಿವೃದ್ಧಿಗೆ 5 ಕೋಟಿ ರೂ., ಪ್ರವಾಸೋದ್ಯಮ ಕ್ಷೇತ್ರದಲ್ಲಿ 500ಕ್ಕೂ ಹೆಚ್ಚು ಜನರ ಸಭೆಗಳಿಗೆ ಸೌಲಭ್ಯಗಳನ್ನು ಒದಗಿಸುವ ಯೋಜನೆಯಲ್ಲಿ ಬೇಕಲ ಪ್ರವಾಸೋದ್ಯಮ ಕೇಂದ್ರವನ್ನು ಸೇರಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ಖಾಸಗಿ ವಲಯವನ್ನು ಒಟ್ಟುಗೂಡಿಸಿ ರಾಜ್ಯಾದ್ಯಂತ 50 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಪಿಎಸ್‌ಸಿ ಜಿಲ್ಲಾ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಯೋಜನೆಯಲ್ಲಿ 5.24 ಕೋಟಿ ರೂ., ಮಂಜೇಶ್ವರ ಕ್ಷೇತ್ರದಲ್ಲಿ ಮಂಜೇಶ್ವರ ಮೀನುಗಾರಿಕಾ ಬಂದರಿನಲ್ಲಿ ಕಿರು ಜೆಟ್ಟಿ ನಿರ್ಮಾಣಕ್ಕೆ1 ಕೋಟಿ ರೂ., ಉಪ್ಪಳ ಪಟ್ಟೋಡಿ ರಸ್ತೆ ನವೀಕರಣಕ್ಕೆ 2 ಕೋಟಿ ರೂ., ಕುಂಬಳೆ ಅರಿಕ್ಕಾಡಿ ಕಡವತ್ ಮೀನುಗಾರಿಕಾ ಕೇಂದ್ರಕ್ಕೆ 1 ಕೋಟಿ ರೂ., ಕಾಸರಗೋಡು ಕ್ಷೇತ್ರದ ಚಂದ್ರಗಿರಿ ಕೋಟೆ, ಎಂಡೋಸಲಾನ್ ಪೀಡಿತರು ಸೇರಿದಂತೆ ಜನರಿಗೆ ಅನುಕೂಲವಾಗುವಂತೆ ಸಮಗ್ರ ಪುನರ್ವಸತಿ ಗ್ರಾಮಗಳ ಯೋಜನೆಗೆ 10 ಕೋಟಿ ರೂ, ತೃಕ್ಕರೀಪುರ ಕ್ಷೇತ್ರಕ್ಕೆ 15 ಕೋಟಿ ರೂ. ಯೋಜನೆಗಳು, ನೀಲೇಶ್ವರದಲ್ಲಿ ಇಎಂಎಸ್ ಟೌನ್ ಹಾಲ್ ನಿರ್ಮಾಣಕ್ಕೆ ತಲಾ 5 ಕೋಟಿ ರೂಪಾಯಿ, ಪಾಲಾಯಿ ರೆಗ್ಯುಲೇಟರ್ ಕಮ್ ಬ್ರಿಡ್ಜ್, ಕೂಕ್ಕೋಟ್-ಕಯ್ಯೂರು ರಸ್ತೆಗೆ ತಲಾ 2 ಕೋಟಿ ರೂ. ನಿಗದಿಪಡಿಸಲಾಗಿದೆ.
ಉದುಮ ಕ್ಷೇತ್ರದ ವ್ಯಾಪ್ತಿಯ ವಿವಿಧ ಯೋಜನೆಗಳಿಗೆ ಬಜೆಟ್‌ನಲ್ಲಿ 41 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. ಬೇಡಡ್ಕ ಪಂಚಾಯತ್‌ನ ಅಂಬಿಲಾಡಿ ಮಟ್ಟ ರಸ್ತೆಯಲ್ಲಿ ಕರಿಚೇರಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಮ್ ಕಮ್ ಸೇತುವೆ ನಿರ್ಮಾಣಕ್ಕೆ 13 ಕೋಟಿ ರೂ.ಗಳನ್ನು, ಉದುಮ ಕ್ಷೇತ್ರದ ದೇಲಂಪಾಡಿ ಪಂಚಾಯತ್‌ನ ಪರಪ್ಪ ದೇಲಂಪಾಡಿ ಊಜಂಪಾಡಿ ರಸ್ತೆ ನಿರ್ಮಾಣಕ್ಕೆ 28 ಕೋಟಿ ರೂ.ಗಳನ್ನು , ಕಾಞಂಗಾಡು ವಿಧಾನಸಭಾ ಕ್ಷೇತ್ರಕ್ಕೆ 12 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ.



