ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಮಾರು ನಾಲ್ಕು ವರ್ಷಗಳಿಂದ ಮುಂದುವರಿದಿರುವ ರಷ್ಯಾ–ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಶಾಂತಿ ಮಾತುಕತೆಗೆ ಮುಂದಾಗುವಂತೆ ರಷ್ಯಾ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಅಧಿಕೃತ ಆಹ್ವಾನ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಯುದ್ಧದಲ್ಲಿ ಮೃತಪಟ್ಟ ಸೈನಿಕರ ಮೃತದೇಹಗಳನ್ನು ಎರಡೂ ರಾಷ್ಟ್ರಗಳು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿವೆ. ಜೊತೆಗೆ, ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸದಿರಲು ಪರಸ್ಪರ ಒಪ್ಪಂದಕ್ಕೆ ಬಂದಿರುವ ವರದಿಗಳು ಹೊರಬಿದ್ದಿವೆ. ಆದರೆ, ಈ ವಿಷಯದಲ್ಲಿ ರಷ್ಯಾ ಸರ್ಕಾರ ಇನ್ನೂ ಅಧಿಕೃತವಾಗಿ ಸ್ಪಷ್ಟನೆ ನೀಡಿಲ್ಲ.
ಇದನ್ನೂ ಓದಿ:
ಕಳೆದ ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಸಂಭಾಷಣೆಗಳು ಮಾತುಕತೆ ಪ್ರಕ್ರಿಯೆಗೆ ಹೊಸ ಚೈತನ್ಯ ನೀಡಿವೆ. ಈ ಸಭೆಗಳ ಬಳಿಕ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇರವಾಗಿ ಭೇಟಿಯಾಗುವ ಸಾಧ್ಯತೆಯೂ ಇದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



