January 30, 2026
Friday, January 30, 2026
spot_img

ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಆರೋಪಿಗೆ 30 ವರ್ಷ ಜೈಲು ಶಿಕ್ಷೆ

ಹೊಸದಿಗಂತ ವರದಿ ಬೆಳಗಾವಿ :

ಅಪ್ರಾಪ್ತೆ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿರುವುದರಿಂದ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಾಳೆ.‌
ಈ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು ಅತ್ಯಾಚಾರಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 2 ಲಕ್ಷ ರೂ. ದಂಡ ವಿಧಿಸಿ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ.

ಜೂನ್ 2020 ರಲ್ಲಿ ಎಪಿಎಂಸಿ ಠಾಣೆಯಲ್ಲಿ ಸಂತ್ರಸ್ತ ಬಾಲಕಿ ದೂರು ನೀಡಿದ್ದಳು. ಆರೋಪಿ ಕಂಗ್ರಾಳಿ ಕೆ.ಎಚ್‌.ನಿವಾಸಿ ನಾಗೇಶ ಕರೆಪ್ಪ ಲಮಾಣಿ(20) ಶಿಕ್ಷೆಗೊಳಗಾಗಿದ್ದು, ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕೆಯ ಮನೆಗೆ ತೆರಳಿ ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ಬಗ್ಗೆ ಬಾಯಿ ಬಿಟ್ಟರೆ ಮನೆಯವರನ್ನು ಕೊಲ್ಲುವ ಬೆದರಿಕೆ ಹಾಕಿದ್ದ. ನಂತರ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. 

ಅಂದಿನ ಪಿಎಸ್‌ಐ ಮಂಜುನಾಥ ಭಜಂತ್ರಿ ದೂರು ದಾಖಲಿಸಿದ್ದರು. ಮುಂದಿನ ಕ್ರಮಕ್ಕಾಗಿ ತನಿಖಾಧಿಕಾರಿ ದಿಲೀಪಕುಮಾರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-01ಬೆಳಗಾವಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಒಟ್ಟು 7 ಸಾಕ್ಷಿಗಳ ವಿಚಾರಣೆ ಹಾಗೂ 37 ದಾಖಲೆಗಳ ಆಧಾರದ ಮೇಲಿಂದ ಆರೋಪಿ ನಾಗೇಶ ಕರೆಪ್ಪ ಲಮಾಣಿ ಮೇಲಿನ ಆರೋಪ ಸಾಬೀತಾಗಿವೆ ಎಂದು ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ತೀರ್ಪು ನೀಡಿದ್ದಾರೆ.

ಅಪರಾಧಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 2  ಲಕ್ಷ ರೂ. ದಂಡ, ತಪ್ಪಿದಲ್ಲಿ ಮತ್ತೆ 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಸಂತ್ರಸ್ತೆಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ. 7 ಲಕ್ಷ ಪರಿಹಾರಧನ ಪಡೆಯಲು ನ್ಯಾಯಾಲಯ ಆದೇಶಿಸಿದೆ. ಈ ಹಣವನ್ನು 5 ವರ್ಷಗಳವರೆಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿಯಾಗಿಡಲು ಸೂಚಿಸಿದೆ. ಪ್ರಕರಣದಲ್ಲಿ ಸರಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ಹಾಜರಾಗಿ ವಾದ ಮಂಡಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !