ಹೊಸದಿಗಂತ ವರದಿ ಬೆಳಗಾವಿ :
ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಹೇಳಿಕೊಂಡು ಯುವಕ ಗ್ರಾಮ ಪಂಗೆ ಆಗಮಿಸಿದ ವೇಳೆ ಯುವಕನನ್ನು ಗ್ರಾಮ ಪಂ ಅಧ್ಯಕ್ಷನೊಬ್ಬ ಬೆನ್ನು ಕಚ್ಚಿ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದೆ.
ಶಿಂಧೋಗಿ ಗ್ರಾಪಂ ಅಧ್ಯಕ್ಷ ದುರ್ಗಪ್ಪ ಟೋಪೋಜಿ ಎಂಬುವರು ಹಲ್ಲೆ ಮಾಡಿದವರು. ಹಲ್ಲೆಗೊಳಗಾದ ಯುವಕನನ್ನು ಶಿಂಧೋಗಿ ಗ್ರಾಮದ ಹನುಮಂತ ಕರಿಕಟ್ಟಿ (30) ಎಂದು ಗುರುತಿಸಲಾಗಿದೆ.
ಗ್ರಾಮದ ಶಾಲೆಯ ಸಮೀಪ ರಸ್ತೆಯ ಮೇಲೆ ಚರಂಡಿ ನೀರು ನಿಂತು ಸಾರ್ವಜನಿಕರಿಗೆ, ಶಾಲಾ ಮಕ್ಕಳು ಹಾಗೂ ಅಂಗನವಾಡಿ ಮಕ್ಕಳಿಗೆ ತೀವ್ರ ತೊಂದರೆ ಉಂಟಾಗುತ್ತಿರುವ ವಿಚಾರದ ಬಗ್ಗೆ ಸಮಸ್ಯೆದ ಕುರಿತು ಹನುಮಂತ ಪಿಡಿಒಗೆ ದೂರು ನೀಡಲು ತೆರಳಿದ್ದರು.
ಇದೇ ಸಂದರ್ಭದಲ್ಲಿ ಏಕಾಏಕಿ ಅಲ್ಲಿಗೆ ಆಗಮಿಸಿದ ಶಿಂಧೋಗಿ ಗ್ರಾಪಂ ಅಧ್ಯಕ್ಷ ದುರ್ಗಪ್ಪ ಟೋಪೋಜಿ ಹಾಗೂ ಆತನ ಸಂಬಂಧಿಕರು ಗಲಾಟೆ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಅಧ್ಯಕ್ಷ ದುರ್ಗಪ್ಪ ಹನುಮಂತನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಆತನ ಬೆನ್ನಿಗೆ ಬಲವಾಗಿ ಕಚ್ಚಿದ್ದಾರೆ. ಪಿಡಿಓ ಕಣ್ಣೆದುರೇ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಆರೋಪಿಸಿದ್ದಾರೆ.
ಇಷ್ಟಕ್ಕೇ ಸುಮ್ಮನಾಗದ ಆರೋಪಿಗಳು ಹನುಮಂತನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದು, ಮನೆಯಲ್ಲಿದ್ದ ಹನುಮಂತನ ತಾಯಿ ಹಾಗೂ ಅಜ್ಜಿಯ ಮೇಲೆ ಬಡಿಗೆ ಮತ್ತು ಸಲಕೆಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಗಾಯಗೊಂಡ ಹನುಮಂತ ಹಾಗೂ ವೃದ್ಧ ಮಹಿಳೆಯನ್ನು ಸವದತ್ತಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸವದತ್ತಿ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.



