ಕೆಲವು ರೋಗಗಳು ದೇಹವನ್ನು ಮಾತ್ರವಲ್ಲ, ಮನಸ್ಸನ್ನೂ ದುಃಖದ ಅಂಚಿಗೆ ತಳ್ಳಿಬಿಡುತ್ತವೆ. ಕುಷ್ಠ ರೋಗವೂ ಅಂಥದೇ ಒಂದು ಕಾಯಿಲೆ. ಔಷಧ ಇದ್ದರೂ, ಚಿಕಿತ್ಸೆ ಸಾಧ್ಯವಾಗಿದ್ದರೂ, ತಪ್ಪು ಕಲ್ಪನೆಗಳು ಮತ್ತು ಭಯದಿಂದ ಇಂದು ಕೂಡ ಹಲವರು ಈ ರೋಗದ ಹೆಸರನ್ನೇ ಕೇಳಿ ದೂರ ಸರಿಯುತ್ತಾರೆ. ಇಂತಹ ಅಜ್ಞಾನಕ್ಕೆ ತೆರೆ ಎಳೆಯಲು, ಜಾಗೃತಿ ಮೂಡಿಸಲು ಮತ್ತು ಕುಷ್ಠ ರೋಗದಿಂದ ಬಳಲುವವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದಲೇ ವಿಶ್ವ ಕುಷ್ಠ ರೋಗ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಕುಷ್ಠ ರೋಗ ದಿನದ ಇತಿಹಾಸ ಮತ್ತು ಮಹತ್ವ
ವಿಶ್ವ ಕುಷ್ಠ ರೋಗ ದಿನವನ್ನು ಪ್ರತಿ ವರ್ಷ ಜನವರಿ ತಿಂಗಳ ಕೊನೆಯ ಭಾನುವಾರ ಆಚರಿಸಲಾಗುತ್ತದೆ. 1954ರಲ್ಲಿ ಫ್ರಾನ್ಸ್‌ನ ಸಮಾಜಸೇವಕ ರೌಲ್ ಫೊಲೆರೊ ಅವರು ಈ ದಿನದ ಆಚರಣೆಗೆ ಚಾಲನೆ ನೀಡಿದರು. ಭಾರತದಲ್ಲಿ ಮಹಾತ್ಮ ಗಾಂಧೀಜಿಯವರ ಮಾನವೀಯ ಚಿಂತನೆಗಳು ವಿಶ್ವ ಕುಷ್ಠ ರೋಗ ದಿನಕ್ಕೆ ಬಲವಾದ ಆಧಾರವಾಗಿವೆ. ಕುಷ್ಠ ರೋಗದಿಂದ ಬಳಲುತ್ತಿದ್ದವರನ್ನು ಸಮಾಜ ತಿರಸ್ಕರಿಸುತ್ತಿದ್ದ ಕಾಲದಲ್ಲೇ, ಗಾಂಧೀಜಿ ಅವರು ರೋಗಿಗಳ ಮೇಲಿನ ಕರುಣೆ ಮಾತ್ರವಲ್ಲದೆ, ಅವರ ಪುನರ್ವಸತಿ, ಚಿಕಿತ್ಸೆ ಮತ್ತು ಗೌರವಯುತ ಜೀವನಕ್ಕಾಗಿ ಅವರು ಸಕ್ರಿಯವಾಗಿ ಶ್ರಮಿಸಿದರು. ಕುಷ್ಠ ರೋಗ ಒಂದು ಶಾಪವಲ್ಲ, ಚಿಕಿತ್ಸೆ ಸಾಧ್ಯವಿರುವ ಕಾಯಿಲೆ ಎಂಬ ಅರಿವನ್ನು ಜನರಲ್ಲಿ ಮೂಡಿಸುವ ಕೆಲಸವನ್ನು ಗಾಂಧೀಜಿ ಕೈಗೊಂಡರು.
ಈ ಮಾನವೀಯ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ, ಅವರ ಪುಣ್ಯತಿಥಿಯನ್ನು ವಿಶ್ವ ಕುಷ್ಠ ರೋಗ ದಿನವಾಗಿ ಆಚರಿಸಲಾಗುತ್ತಿದೆ.
ಇದನ್ನೂ ಓದಿ:
ಕುಷ್ಠ ರೋಗದ ಲಕ್ಷಣಗಳು
ಕುಷ್ಠ ರೋಗ ಮುಖ್ಯವಾಗಿ ಚರ್ಮ ಮತ್ತು ನರಗಳನ್ನು ಹಾನಿಗೊಳಿಸುತ್ತದೆ. ಚರ್ಮದ ಮೇಲೆ ಬಣ್ಣ ಕಳೆದುಕೊಂಡ ಅಥವಾ ಸಂವೇದನೆ ಇಲ್ಲದ ಕಲೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣ. ಕೈ, ಕಾಲುಗಳಲ್ಲಿ ಜುಮ್ಮೆನಿಸುವಿಕೆ, ನರ ನೋವು, ಗಾಯಗಳು ಗುಣವಾಗದೇ ಇರುವುದೂ ಸೂಚನೆಗಳಾಗಿವೆ. ಆರಂಭಿಕ ಹಂತದಲ್ಲೇ ಗುರುತಿಸಿದರೆ ಗಂಭೀರತೆ ತಪ್ಪಿಸಬಹುದು.
ಕುಷ್ಠ ರೋಗವನ್ನು ಹೇಗೆ ಗುಣಪಡಿಸಬಹುದು?
ಕುಷ್ಠ ರೋಗ ಸಂಪೂರ್ಣವಾಗಿ ಗುಣಪಡಿಸಬಹುದಾದ ಕಾಯಿಲೆ. ಸರ್ಕಾರ ಉಚಿತವಾಗಿ ನೀಡುವ ಮಲ್ಟಿ ಡ್ರಗ್ ಥೆರಪಿ (MDT) ಚಿಕಿತ್ಸೆಯಿಂದ ರೋಗ ಸಂಪೂರ್ಣವಾಗಿ ಗುಣವಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಆರಂಭಿಸಿದರೆ ರೋಗ ಇತರರಿಗೆ ಹರಡುವುದಿಲ್ಲ. ಕುಷ್ಠ ರೋಗವು ಶಾಪವಲ್ಲ, ಲಜ್ಜೆಯ ವಿಷಯವೂ ಅಲ್ಲ ಅದು ಚಿಕಿತ್ಸೆ ಸಾಧ್ಯವಿರುವ ಒಂದು ಸಾಮಾನ್ಯ ಕಾಯಿಲೆ ಎಂಬ ಅರಿವು ಸಮಾಜಕ್ಕೆ ಅಗತ್ಯ.



