January 30, 2026
Friday, January 30, 2026
spot_img

ತಿರುಪತಿ ಲಡ್ಡು ಪ್ರಸಾದ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿಲ್ಲ: CBI ತನಿಖೆಯಲ್ಲಿ ಬಹಿರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುಮಲ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದವನ್ನು ಗೋಮಾಂಸದ ಕೊಬ್ಬಿನಿಂದ ತಯಾರಿಸಿಲ್ಲ ಎಂದು ಕೇಂದ್ರ ತನಿಖಾ ಸಂಸ್ಥೆ ಶುಕ್ರವಾರ ಅಧಿಕೃತವಾಗಿ ದೃಢಪಡಿಸಿದೆ.

ಪ್ರಸಾದದ ಬಗ್ಗೆ ಗಂಭೀರ ಆರೋಪಗಳು ಕೇಳಿ ಬಂದ ನಂತರ ಪ್ರಕರಣದ ತನಿಖೆ ನಡೆಸಿದೆ .ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ(ಎಸ್‌ಐಟಿ), ತಿರುಪತಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದೆ.

12 ರಾಜ್ಯಗಳಲ್ಲಿ 15 ತಿಂಗಳ ಕಾಲ ನಡೆಸಿದ ಎಸ್ಐಟಿ ತನಿಖೆಯ ನಂತರ ಶುಕ್ರವಾರ ನೆಲ್ಲೂರು ಎಸಿಬಿ ನ್ಯಾಯಾಲಯದಲ್ಲಿ ತನ್ನ ಅಂತಿಮ ಚಾರ್ಜ್ ಶೀಟ್ ಸಲ್ಲಿಸಿದೆ. 2019 ಮತ್ತು 2024 ರ ನಡುವೆ ದೇವಾಲಯಕ್ಕೆ ಸರಬರಾಜು ಮಾಡಲಾದ ತುಪ್ಪದಲ್ಲಿ ಯಾವುದೇ ಪ್ರಾಣಿಗಳ ಕೊಬ್ಬು ಇಲ್ಲ ಎಂದು ಸಿಬಿಐ ತಿಳಿಸಿದೆ.

ಸೆಪ್ಟೆಂಬರ್ 2024 ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು, ಭಕ್ತರಿಗೆ ನೀಡುವ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ ಮಾಡಿದ ಕಳಪೆ ಗುಣಮಟ್ಟದ ತುಪ್ಪವನ್ನು ಬಳಸಲಾಗಿದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ ನಂತರ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.

ತಿರುಪತಿ ದೇವಸ್ಥಾನಕ್ಕೆ ಪೂರೈಕೆ ಮಾಡಲಾದ ತುಪ್ಪವು ನಿಜವಾದ ಡೈರಿ ತುಪ್ಪವಲ್ಲ, ಬದಲಾಗಿ ಪಾಮ್ ಎಣ್ಣೆ, ಪಾಮ್ ಕರ್ನಲ್ ಎಣ್ಣೆ ಮತ್ತು ಇತರ ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಿದ ಕೃತಕ ತುಪ್ಪ ಎಂದು ಸಿಬಿಐನ ವಿವರವಾದ ಚಾರ್ಜ್‌ಶೀಟ್ ಬಹಿರಂಗಪಡಿಸಿದೆ.

ನೆಲ್ಲೂರು ಎಸಿಬಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ಚಾರ್ಜ್‌ಶೀಟ್‌ನಲ್ಲಿ ಒಟ್ಟು 36 ಮಂದಿ ಪ್ರಮುಖ ಆರೋಪಿಗಳನ್ನು ಹೆಸರು ನಮೂದಿಸಲಾಗಿದೆ. ಇವರಲ್ಲಿ ಡೈರಿ ಮಾಲೀಕರು, ಮಾಜಿ ಟಿಟಿಡಿ ಅಧಿಕಾರಿಗಳು ಸೇರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !