ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಉಚ್ಚಿಲ ಪರಿಸರದ ಮಳೆ ನೀರು ಹರಿದು ಹೋಗುವ ಚರಂಡಿಗೆ ತ್ಯಾಜ್ಯವಸ್ತುಗಳನ್ನು ಎಸೆದ ಗುಜರಿ ಅಂಗಡಿ ಮಾಲಿಕಗೆ ಬರೋಬ್ಬರಿ 20 ಸಾವಿರ ರೂ. ದಂಡ ವಿಧಿಸುವ ಮೂಲಕ ಪರಿಸರ ಕೆಡಿಸುವವರಿಗೆ ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ.
ಕೋಟೆಕಾರು ಬೀರಿಯ ಎ.ಆರ್. ಟ್ರೇಡರ್ಸ್ ಎಂಬ ಗುಜರಿ ಅಂಗಡಿಯ ಮಾಲೀಕ ಸಯ್ಯದ್ ಸಂಶೀರ್ ಎಂಬವರ ವಿರುದ್ಧ ಸೋಮೇಶ್ವರ ಪುರಸಭೆಯ ಅಧಿಕಾರಿಗಳು ಈ ದಂಡವನ್ನು ಪ್ರಯೋಗಿಸಿ ಎಚ್ಚರಿಕೆ ನೀಡಿದ್ದಾರೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ 15 ಪ್ರಮುಖ ಕೇಂದ್ರಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಂದರಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ತೀವ್ರ ನಿಘಾ ವಹಿಸಲಾಗುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಎಸೆಯುವವರು ಕಂಡು ಬಂದಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ ಅವರು ಎಚ್ಚರಿಕೆ ನೀಡಿದ್ದಾರೆ.



