ಹೊಸದಿಗಂತ ವರದಿ, ಕೊಟ್ಟೂರು:
ಪಟ್ಟಣದ ಹರಪನಹಳ್ಳಿ ರಸ್ತೆಯ ಮರಿ ಕೊಟ್ಟೂರೇಶ್ವರ ಬಡಾವಣೆ ಮನೆಯೊಂದರಲ್ಲಿ ಮಗನೇ ತನ್ನ ತಂದೆ ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿ ಹೂತಿಟ್ಟಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಪಟ್ಟಣದಲ್ಲಿ ಟೈರ್ ರಿಮೋಲ್ಡ್ ವರ್ಕ್ ಶಾಪ್ ನಡೆಸುತ್ತಿದ್ದ ಅಕ್ಷಯ್ ಕೊಲೆ ಆರೋಪಿ. ತಂದೆ ಎಚ್.ಭೀಮರಾವ್, ತಾಯಿ ಎಚ್. ಜಯಲಕ್ಷ್ಮೀ ಮತ್ತು ಪಿಯು ಓದುತ್ತಿರುವ ತಂಗಿ ಎಚ್.ಅಮೃತಾ ಕೊಲೆಯಾಗಿರುವವರು.
ಸದ್ಯ ಬೆಂಗಳೂರಿನ ಪೊಲೀಸರ ವಶದಲ್ಲಿರುವ ಆರೋಪಿಯನ್ನು, ಕೊಟ್ಟೂರು ಪೊಲೀಸರು ಇಲ್ಲಿಗೆ ಕರೆ ತಂದು ವಿಚಾರಣೆ ನಡೆಸಿ ನಂತರೆ ಮುಂದಿನ ಕ್ರಮಗಳನ್ನು ಕೈಗೊಂಡು ಶವಗಳನ್ನು ಹುಡುಕುವ ಸಾಧ್ಯತೆಗಳಿವೆ. ಕೊಲೆ ಮಾಡಿರುವ ಕಾರಣ ಇತರೆ ವಿಷಯಗಳು ಅವನು ಬಂದ ನಂತರವೇ ತಿಳಿಯಲಿವೆ. ಘಟನೆ ಕುರಿತು ಸ್ಥಳೀಯ ಪೊಲೀಸರು ಅಽಕೃತ ಮಾಹಿತಿಗಳನ್ನು ನೀಡಿಲ್ಲ.

ಡಿ.೨೮ರಂದು ಬೆಂಗಳೂರಿಗೆ ತೆರಳಿದ್ದ ಆರೋಪಿ ಅಕ್ಷಯ್, ಆರೋಗ್ಯ ತಪಾಸಣೆಗೆ ಬೆಂಗಳೂರಿಗೆ ಬಂದಿದ್ದ ತಂದೆ ತಾಯಿ ತಂಗಿ ಕಾಣೆಯಾಗಿದ್ದಾರೆಂದು ಅಲ್ಲಿನ ಠಾಣೆಯೊಂದರಲ್ಲಿ ದೂರು ನೀಡಿದ್ದ. ದೂರು ಪರಿಶೀಲಿಸಿ ಕ್ರಮಗಳನ್ನು ನಡೆಸಿದ್ದ ಅಲ್ಲಿನ ಪೊಲೀಸರಿಗೆ ಅವನ ಮಾತುಗಳಿಂದ ಅನುಮಾನಗೊಂಡು ವಿಚಾರಣೆಗೊಳಪಡಿಸಿದಾಗ, ಕೊಟ್ಟೂರು ಮನೆಯಲ್ಲಿ ತಾನೆ ಕೊಲೆ ಮಾಡಿ ಅಲ್ಲಿಯೇ ಹೂತಿರುವುದಾಗಿ ಬಾಯಿ ಬಿಟ್ಟಿದ್ದಾನೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರಿನಿಂದ ಬಂದ ಮಾಹಿತಿಯಂತೆ ಪಟ್ಟಣದ ಪೊಲೀಸರು ಸಹ ಬೀಗ ಹಾಕಿದ ಮನೆ ಪರಿಶೀಲಿಸಿದಾಗ ಮನೆ ಹಾಲ್ನಲ್ಲಿ ಟೈಲ್ಸ್ ಕಟ್ ಮಾಡಿ ನೆಲ ಅಗೆದು ಮಣ್ಣನ್ನು ಪಕ್ಕದಲ್ಲಿ ಗುಡ್ಡೆ ಹಾಕಿರುವುದು ಕಾಣಿಸಿದ್ದು, ಅನುಮಾನಕ್ಕೆ ಪುಷ್ಟಿ ನೀಡಿದೆ.
ಜಿಲ್ಲಾ ಎಸ್ಪಿ ಜಾಹ್ನವಿ ಮಧ್ಯಾಹ್ನ ಆಗಮಿಸಿ ಪರಿಶೀಲಿಸಿದರು. ಆರೋಪಿಯನ್ನು ಕೊಟ್ಟೂರಿಗೆ ಕರೆ ತಂದು ವಿಚಾರಣೆ ನಡೆಸಿದ ನಂತರ ಮುಂದಿನ ಕ್ರಮಗಳನ್ನು ಪೊಲೀಸರು ಕೈಗೊಳ್ಳಲಿದ್ದಾರೆ.



