ಹೊಸದಿಗಂತ ವರದಿ,ಗದಗ:
ತಾಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿರುವ ಉತ್ಖನನ ಸ್ಥಳದಲ್ಲಿ ಶುಕ್ರವಾರ ಯಾವುದೇ ಪ್ರಾಚ್ಯ ಅವಶೇಷಗಳು ಪತ್ತೆಯಾಗಲಿಲ್ಲ. ಆದರೆ, ಉತ್ಖನನ ನಡೆದಿರುವ ಎ ಬ್ಲಾಕ್‌ನಲ್ಲಿ ನಿಜ ಹಾವು ಕಾಣಿಸಿಕೊಂಡ ಪರಿಣಾಮ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯ ದಿನೇ ದಿನೇ ಹೊಸ ಹೊಸ ಅಚ್ಚರಿಗಳಿಗೆ ಸಾಕ್ಷಿಯಾಗುತ್ತಿದೆ. ನಿತ್ಯ ಒಂದಿಲ್ಲೊಂದು ಪುರಾತನ ಅವಶೇಷಗಳು ಪತ್ತೆಯಾಗುತ್ತಿದ್ದು, ಇಡೀ ಪ್ರದೇಶವೇ ಕುತೂಹಲದ ಕೇಂದ್ರವಾಗುತ್ತಿದೆ. ಈ ನಡುವೆ ೧೩ನೇ ದಿನದ ಉತ್ಖನನ ಕಾರ್ಯ ಆರಂಭಕ್ಕೂ ಮುನ್ನ ನಿಜವಾದ ಹಾವು ಕಾಣಿಸಿಕೊಂಡಿರುವ ಘಟನೆ ಸಾಕಷ ಚರ್ಚೆಗೆ ಗ್ರಾಸವಾಗಿದೆ.
ಲಕ್ಕುಂಡಿಯ ಶ್ರೀಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಇದುವರೆಗೂ ಏಕಮುಖಿ, ದ್ವಿಮುಖಿ, ತ್ರಿಮುಖಿ, ಪಂಚಮುಖಿ ಹಾಗೂ ಸಪ್ತಮುಖಿ ನಾಗರ ಶಿಲೆಗಳು ಪತ್ತೆಯಾಗಿದ್ದವು. ಆದರೆ, ಇಂದು ಬೆಳಗಿನ ಜಾವ ಉತ್ಖನನ ಸ್ಥಳದ ಗುಂಡಿಯಲ್ಲಿ ಸುಮಾರು ಎರಡುವರೆ ಅಡಿ ಉದ್ದದ ನಿಜವಾದ ಹಾವು ಪ್ರತ್ಯಕ್ಷವಾಗಿದೆ. ಮೈಮೇಲೆ ಕಪ್ಪು ಚುಕ್ಕೆಗಳಿರುವ ಈ ಹಾವು ಬಳೆಒಡಕ ಜಾತಿಗೆ ಸೇರಿದ ವಿಷಪೂರಿತ ಹಾವು ಎನ್ನಲಾಗುತ್ತಿದೆ.
ಹಾವು ಕಾಣಿಸಿಕೊಂಡ ತಕ್ಷಣ ಉತ್ಖನನ ಮೇಲ್ವಿಚಾರಕ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದರು. ನಾಗರ ಶಿಲೆಗಳ ಪತ್ತೆಯ ನಡುವೆಯೇ ನಿಜವಾದ ಹಾವು ಕಾಣಿಸಿಕೊಂಡಿರುವುದು ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳಲ್ಲಿ ಆತಂಕಕ್ಕಿಂತಲೂ ಹೆಚ್ಚು ಕುತೂಹಲ ಮೂಡಿಸಿದೆ.



