ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯಕ್ಕೆ ತಿರುವನಂತಪುರದ ಗ್ರೀನ್‌ಫೀಲ್ಡ್ ಮೈದಾನ ಸಜ್ಜಾಗಿದೆ. ಈ ಪಂದ್ಯವು ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಪಾಲಿಗೆ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿದೆ. ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಅವಕಾಶ ಪಡೆದಿದ್ದರೂ ಸ್ಯಾಮ್ಸನ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ.
ಮೊದಲ ಪಂದ್ಯದಲ್ಲಿ 10 ರನ್, ಎರಡನೇ ಪಂದ್ಯದಲ್ಲಿ 6 ರನ್, ಮೂರನೇ ಪಂದ್ಯದಲ್ಲಿ ಶೂನ್ಯ ಮತ್ತು ನಾಲ್ಕನೇ ಪಂದ್ಯದಲ್ಲಿ 24 ರನ್ ಗಳಿಸಿದ ಸ್ಯಾಮ್ಸನ್, ನಾಲ್ಕು ಇನಿಂಗ್ಸ್‌ಗಳಲ್ಲಿ ಒಟ್ಟಾರೆ ಕೇವಲ 40 ರನ್ ಮಾತ್ರ ಕಲೆಹಾಕಿದ್ದಾರೆ. ಈ ಹಿನ್ನಲೆಯಲ್ಲಿ ಐದನೇ ಪಂದ್ಯವನ್ನು ಅವರ ‘ಮಾಡು ಇಲ್ಲವೇ ಮಡಿ’ ಪಂದ್ಯವೆಂದು ನೋಡಲಾಗುತ್ತಿದೆ. ಇಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಟಿ20 ವಿಶ್ವಕಪ್‌ಗೆ ಆರಂಭಿಕನಾಗಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ:
ಸ್ಯಾಮ್ಸನ್ ಮತ್ತೊಮ್ಮೆ ವಿಫಲರಾದರೆ, ಆರಂಭಿಕ ಸ್ಥಾನಕ್ಕೆ ಇಶಾನ್ ಕಿಶನ್ ಆಯ್ಕೆಯಾಗುವ ಸಾಧ್ಯತೆ ಬಲವಾಗಿದೆ. ಮುಂಬರುವ ವಿಶ್ವಕಪ್‌ನಲ್ಲಿ ತಿಲಕ್ ವರ್ಮಾ ಮೂರನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದ್ದು, ಇಶಾನ್ ಕಿಶನ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಯೋಚನೆ ತಂಡದೊಳಗೆ ಚರ್ಚೆಯಲ್ಲಿದೆ. ಹೀಗಾಗಿ ಇಂದಿನ ಪಂದ್ಯವು ಸಂಜು ಸ್ಯಾಮ್ಸನ್ ಭವಿಷ್ಯ ನಿರ್ಧರಿಸುವ ಮಹತ್ವದ ಕ್ಷಣವಾಗಲಿದೆ.



