ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.
ರಾಜ್ಯದ ಎಲ್ಲ ರಾಜಕೀಯ ಪಕ್ಷಗಳಲ್ಲಿನ ಪ್ರಭಾವಿ ವ್ಯಕ್ತಿಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬುದಾಗಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮ ಮರಳು ಸಾಗಣೆಯನ್ನು ತಡೆಯಲು ಗೃಹ ಸಚಿವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟ ಎಂದು ಹೇಳಿದೆ.
ಈ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದೆ.
ವಿಧಾನಸಭಾ ಕಲಾಪದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೀಡಿದ ಹೇಳಿಕೆ, ಅಕ್ರಮ ಗಣಿಗಾರಿಕೆ ದೊಡ್ಡ ದಂಧೆಯಾಗಿದೆ. ಪ್ರಕರಣ ಸಂಬಂಧ ಯಾರ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ. ಯಾರನ್ನೂ ದೂಷಣೆ ಮಾಡುತ್ತಿಲ್ಲ. ಏಕೆಂದರೆ ಇದು ಅತ್ಯಂತ ಮುಜುಗರ ಸಂಗತಿಯಾಗಿದೆ. ಈ ಸಂಬಂಧ ಸೀಮಿತವಾಗಿ ಉತ್ತರವನ್ನು ಮಾತ್ರ ನೀಡುತ್ತಿದ್ದು, ಅನೇಕ ಪ್ರಭಾವಿಗಳು ದಂಧೆಯಲ್ಲಿ ಭಾಗಿಯಾಗಿದ್ದಾರೆ. ಈ ವಿಷಯವನ್ನು ಚರ್ಚಿಸುವುದಕ್ಕಾಗಿ ಸಭೆ ಕರೆಯುವುದಾಗಿ ಹೇಳಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.
ಈ ವಿಚಾರದಲ್ಲಿ ರಾಜ್ಯದ ಗೃಹ ಸಚಿವರು ಅಸಹಾಯಕರಾಗಿದ್ದಾರೆ ಎಂದು ಭಾವಿಸಿದರೆ, ರಾಜ್ಯದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯ ಅಕ್ರಮ ಚಟುವಟಿಕೆಯನ್ನು ರಾಜ್ಯದ ಆಡಳಿತ ವ್ಯವಸ್ಥೆ ತಡೆಯುತ್ತದೆ ಎಂಬ ಭರವಸೆಯಿಲ್ಲ. ಇದೊಂದು ಗಂಭೀರವಾದ ಸಮಸ್ಯೆಯಾಗಿದ್ದು ಕೇಂದ್ರ ಸಂಸ್ಥೆ, ವಿಶೇಷವಾಗಿ ರಚಿಸುವ ತನಿಖಾ ಸಂಸ್ಥೆ ಇಲ್ಲವೇ ವಿಶೇಷ ತನಿಖಾ ದಳದಿಂದ(ಎಸ್‌ಐಟಿ) ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕಾದ ಅಗತ್ಯವಿದೆ ಎಂದು ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ತಾರಾ ವಿತಾಸ್ತ ಗಂಜು ಅವರಿದ್ದ ವಿಭಾಗೀಯ ಪೀಠ ಆದೇಶದಲ್ಲಿ ತಿಳಿಸಿದೆ.



