ಹೊಸ ದಿಗಂತ ವರದಿ,ಕಲಬುರಗಿ:
ಮನುಷ್ಯರಿಗೆ ಉತ್ತಮವಾದ ಗುಣ ಪೆಡೆಯುವುದು ಎಷ್ಟು ಮಹತ್ವವೊ ದುಷ್ಟಗುಣಗಗಳಿಂದ ದೂರ ಇರುವುದು ಅಷ್ಟೆ ಮುಖ್ಯ ಎಂದು ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ನೂತನ ವಿದ್ಯಾಲಯ ಸಂಸ್ಥೆಯ ಸತ್ಯಪ್ರಮೋದ ತೀರ್ಥ ಸಭಾಮಂಟಪದಲ್ಲಿ ಶನಿವಾರ ಪ್ರವಚನ ನೀಡಿ ಮಾತನಾಡಿದ ಅವರು,ಮಾತ್ಸರ್ಯ ಸಾಧನೆಗೆ ಪ್ರತಿಬಂಧಕ.ಇನ್ನೊಬ್ಬರ ಬೆಳವಣಿಗೆ ಕಂಡು ಮಾತ್ಸರ್ಯ ಪಡಬಾರದು. ನಾನು ಎಂಬ ಅಹಂಕಾರ ಸಾಧನೆಗೆ ಅಡ್ಡಿ ಬರುತ್ತದೆ. ಹತ್ತಾರು ಉತ್ತಮ ಕಾರ್ಯ ಮಾಡಿ ಒಂದು ಕೆಟ್ಟ ಕೆಲಸ ಮಾಡಿದರೆ ಸಂಪಾದಿಸಿದ ಪುಣ್ಯ ನಾಶವಾಗುತ್ತದೆ ಎಂದು ಹೇಳಿದರು.
ಸಂಪತ್ತು ಇರುವಾಗ ದಾನಮಾಡುವಕ್ಕಿಂತ ಏನು ಇಲ್ಲದ ಸಮಯದಲ್ಲಿ ಮಾಡುವ ದಾನ ಶ್ರೇಷ್ಠ ಎಂದು ರಂತಿ ದೇವ ತಿಳಿದುಕೊಂಡ.ನಾನು ಗಳಿಸಿದ ಪುಣ್ಯ ಎಂಬ ಪಾತ್ರೆಗೆ ಅಹಂಕಾರ ಎಂಬ ತೂತು ಬಿದ್ದರೆ ಆ ಪಾತ್ರೆ ಯಾವತ್ತೂ ತುಂಬುವುದಿಲ್ಲ. ಅಹಂಕಾರ, ಮಾತ್ಸರ್ಯ ನಮ್ಮ ಹತ್ತಿರ ಸುಳಿಯದಂತೆ ಮಾಡುವ ಶಕ್ತಿ ರಾಮಮಂತ್ರದಲ್ಲಿದೆ ಎಂದು ಶ್ರೀಗಳು ಪ್ರತಿಪಾದಿಸಿದರು.
ನಾವು ಮಾಡುವ ತ್ಯಾಗದಿಂದ ನಾಲ್ಕು ಜನರಿಗಾದರೂ ಒಳಿತಾಗಬೇಕು.ರಾಮಚಂದ್ರನು ಮಾಡಿದ ತ್ಯಾಗ ಕೊಟ್ಯಂತರ ಜನರಿಗೆ ಪ್ರಯೋಜನವಾಗಿದೆ. ರಾಮನ ತ್ಯಾಗ ರಾಕ್ಷಸರನ್ನು ಸಂಹರಿಸಿ ಸಜ್ಜನರಿಗೆ ಹಸಾಯ ಮಾಡಿತು.ಪ್ರತಿಯೊಬ್ಬರೂ ರಾಮನ ತ್ಯಾಗ ಅನುಸತಿಸಬೇಕು ಎಂದು ಶ್ರೀಗಳು ಉಪದೇಶಿಸಿದರು.



