ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆ 11 ಗಂಟೆಗೆ 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇದು ಸಚಿವರ ಸತತ 9ನೇ ಬಜೆಟ್ ಆಗಿದ್ದು, ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಭಾರಿ ನಿರೀಕ್ಷೆಗಳಿವೆ.
ಗಮನಿಸಬೇಕಾದ 10 ಪ್ರಮುಖ ಅಂಶಗಳು ಇಲ್ಲಿವೆ:
ಹಣಕಾಸಿನ ಕೊರತೆ ಮತ್ತು ಸಾಲ: ಸರ್ಕಾರದ ಸಾಲವನ್ನು ಜಿಡಿಪಿಯ ಶೇ. 49 ರಿಂದ 51ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ಈ ಬಾರಿ ಹಣಕಾಸಿನ ಕೊರತೆಯನ್ನು ಶೇ. 4.2ಕ್ಕೆ ಸೀಮಿತಗೊಳಿಸುವ ನಿರೀಕ್ಷೆಯಿದೆ.
ಬಂಡವಾಳ ಲಾಭ ತೆರಿಗೆ: ದೀರ್ಘಕಾಲೀನ ಬಂಡವಾಳ ಲಾಭ ತೆರಿಗೆಯ ಮಿತಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ವಿಶೇಷವಾಗಿ ಸೆಕ್ಷನ್ 87A ಅಡಿಯಲ್ಲಿ ತೆರಿಗೆ ರಿಯಾಯಿತಿಯ ವಿಸ್ತರಣೆಯನ್ನು ತೆರಿಗೆದಾರರು ನಿರೀಕ್ಷಿಸುತ್ತಿದ್ದಾರೆ.
ರಕ್ಷಣಾ ವಲಯಕ್ಕೆ ಒತ್ತು: ರಕ್ಷಣಾ ಸಚಿವಾಲಯವು ಮಿಲಿಟರಿ ವೆಚ್ಚದಲ್ಲಿ ಶೇ. 20ರಷ್ಟು ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದು, ಈ ವಲಯದಲ್ಲಿ ವಿದೇಶಿ ಹೂಡಿಕೆಗೆ ನಿಯಮಗಳನ್ನು ಸಡಿಲಗೊಳಿಸುವ ಸಾಧ್ಯತೆಯಿದೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳ: ಹೊಸ ತೆರಿಗೆ ಪದ್ಧತಿಯಡಿ ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಈಗಿರುವ ₹75,000 ರಿಂದ ₹1 ಲಕ್ಷಕ್ಕೆ ಏರಿಸುವ ನಿರೀಕ್ಷೆಯಿದೆ.
ಆಮದು ಸುಂಕ ಕಡಿತ: ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಎಲೆಕ್ಟ್ರಾನಿಕ್ಸ್ ಮತ್ತು ಜವಳಿ ಉದ್ಯಮಕ್ಕೆ ಸಂಬಂಧಿಸಿದ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಬೇಕೆಂದು ರಫ್ತುದಾರರು ಒತ್ತಾಯಿಸುತ್ತಿದ್ದಾರೆ.
ಖಾಸಗಿ ಹೂಡಿಕೆಗೆ ಬಲ: ತೆರಿಗೆ ಸಡಿಲಿಕೆ ಮತ್ತು ಸುಲಭ ವ್ಯವಹಾರ ಮೂಲಕ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರ ಮುಂದಾಗಬಹುದು.
ನಿಯಮಗಳ ಸರಳೀಕರಣ: ತೆರಿಗೆ ಕಡಿತದ ಜೊತೆಗೆ ಅನಗತ್ಯ ನಿಯಮಗಳನ್ನು ತೆಗೆದುಹಾಕುವ ಮೂಲಕ ಆರ್ಥಿಕತೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರ ಪ್ಲಾನ್ ಮಾಡಿದೆ.
ಮೂಲಸೌಕರ್ಯ ವೆಚ್ಚ: ಕಳೆದ ಕೆಲವು ವರ್ಷಗಳಿಂದ ಮೂಲಸೌಕರ್ಯದ ಮೇಲಿನ ವೆಚ್ಚವು ಜಿಡಿಪಿಯ ಶೇ. 3.1ಕ್ಕೆ ಏರಿದೆ. ಈ ಬಾರಿಯೂ ಇದು ಮುಂದುವರಿಯುವ ಸಾಧ್ಯತೆಯಿದೆ.
ತೆರಿಗೆ ಸುಧಾರಣೆಗಳು: ಷೇರು ಮಾರುಕಟ್ಟೆಯಲ್ಲಿನ ನಷ್ಟದ ಮೇಲೂ ವಿಧಿಸಲಾಗುವ ‘ಸೆಕ್ಯೂರಿಟಿಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್’ ರದ್ದುಗೊಳಿಸಲು ತಜ್ಞರು ಆಗ್ರಹಿಸಿದ್ದಾರೆ. ಅಲ್ಲದೆ, FICCI ಕೂಡ ಐಟಿ ನಿಯಮಗಳಲ್ಲಿ ಬದಲಾವಣೆಗೆ ಕೋರಿದೆ.
ಸರ್ಕಾರದ ಸಾಲದ ಮೇಲೆ ನಿಗಾ: ವಿತ್ತೀಯ ಕೊರತೆ ಹೆಚ್ಚಾದಲ್ಲಿ ಸರ್ಕಾರ ಮಾಡುವ ಒಟ್ಟು ಸಾಲದ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಮಾರುಕಟ್ಟೆಯು ಸರ್ಕಾರದ ಸಾಲದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಲಿದೆ.



