ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, ಭಾನುವಾರದಂದು ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಆದರೆ, ಪ್ರತಿ ವರ್ಷ ಫೆಬ್ರವರಿ 1ರಂದೇ ಕೇಂದ್ರ ಬಜೆಟ್ ಅನ್ನು ಏಕೆ ಮಂಡಿಸಲಾಗುತ್ತದೆ ಎಂದು ನಿಮಗೆ ಗೊತ್ತಾ?
ಇಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಪೂರ್ವ ತಯಾರಿಯಲ್ಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಜೆಟ್ ಆರಂಭವಾಗಲಿದೆ.
2016ರವರೆಗೂ ಭಾರತದಲ್ಲಿ ಬ್ರಿಟಿಷ್ ಕಾಲದ ಪದ್ಧತಿಯಂತೆ ಬಜೆಟ್ ಅನ್ನು ಫೆಬ್ರವರಿ ತಿಂಗಳ ಕೊನೆಯ ವರ್ಕಿಂಗ್ ಡೇನಲ್ಲಿ ಮಂಡಿಸಲಾಗುತ್ತಿತ್ತು. ಆದರೆ ಹಣಕಾಸು ವರ್ಷ ಏಪ್ರಿಲ್ 1ರಿಂದ ಆರಂಭವಾಗುವುದರಿಂದ, ವ್ಯಾಪಾರ ವಲಯ ಮತ್ತು ತೆರಿಗೆದಾರರಿಗೆ ಹೊಸ ನೀತಿಗಳು ಮತ್ತು ತೆರಿಗೆ ನಿಯಮಗಳನ್ನು ಅನುಸರಿಸಲು ಸ್ವಲ್ಪ ಸಮಯ ಮಾತ್ರ ದೊರೆಯುತ್ತಿತ್ತು. ಬಜೆಟ್ ಅನುಮೋದನೆ ಪಡೆದು ಜಾರಿಗೆ ಬರುವಷ್ಟರಲ್ಲಿ ಹೊಸ ಹಣಕಾಸು ವರ್ಷ ಅದಾಗಲೇ ಆರಂಭವಾಗಿರುತ್ತಿತ್ತು. ಇದರಿಂದ ಹಲವಾರು ಸರ್ಕಾರಿ ಯೋಜನೆಗಳು ಮತ್ತು ನೀತಿಗಳು ಸಮಯಕ್ಕೆ ಸರಿಯಾಗಿ ಜಾರಿಯಾಗುತ್ತಿರಲಿಲ್ಲ.
2017ರಲ್ಲಿ ಈ ಬಜೆಟ್ ಮಂಡನೆ ದಿನಾಂಕವನ್ನು ಮೊದಲ ಬಾರಿಗೆ ಮೋದಿ ಸರ್ಕಾರದ ಆಳ್ವಿಕೆಯಲ್ಲಿ ಬದಲಾಯಿಸಲಾಯಿತು. ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೊಸ ಹಣಕಾಸು ವರ್ಷ ಆರಂಭವಾಗುವ ಮೊದಲು ಎಲ್ಲರಿಗೂ ಯೋಜನೆ ರೂಪಿಸಲು ಹೆಚ್ಚಿನ ಸಮಯ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಅದೇ ರೀತಿ, ವಸಾಹತುಶಾಹಿ ಕಾಲದಿಂದ ಅನುಸರಿಸಲಾಗುತ್ತಿದ್ದ ಬಜೆಟ್ ಮಂಡನೆಯ ಸಮಯವನ್ನೂ ಬದಲಾಯಿಸಲಾಯಿತು. 1999ರ ತನಕ ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಆದರೆ ಆಗಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಮಾಧ್ಯಮಗಳಿಗೆ ಹೆಚ್ಚು ಸಮಯ ಒದಗಿಸುವುದು ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಸಂವಹನ ಸಾಧ್ಯವಾಗುವಂತೆ ಬೆಳಿಗ್ಗೆ 11 ಗಂಟೆಗೆ ಸಮಯವನ್ನು ಬದಲಾಯಿಸಿದರು.



