ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಬಜೆಟ್ನಲ್ಲಿ ಭರ್ಜರಿ ಟ್ಯಾಕ್ಸ್ ರಿಲೀಫ್ ಕೊಟ್ಟಿದ್ದ ಸರ್ಕಾರ ಈಗ ಮುಂಬರುವ ಬಜೆಟ್ನಲ್ಲೂ ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ವರದಿಗಳ ಪ್ರಕಾರ ಸರ್ಕಾರವು ಅಮೆರಿಕ, ಜರ್ಮನಿ ಮೊದಲಾದ ಕೆಲ ದೇಶಗಳಲ್ಲಿ ಇರುವ ರೀತಿಯಲ್ಲಿ ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂ ಅಥವಾ ಜಂಟಿ ತೆರಿಗೆ ವ್ಯವಸ್ಥೆ ತರುವ ಬಗ್ಗೆ ಯೋಜಿಸಿದೆ. ಇದೇನಾದರೂ ಜಾರಿಗೆ ಬಂದಲ್ಲಿ ಒಂದೇ ಆದಾಯಮೂಲ ಇರುವ ಕುಟುಂಬಗಳಿಗೆ ತೆರಿಗೆ ಉಳಿಸಲು ಅನುಕೂಲವಾಗುವ ನಾಧ್ಯತೆ ಇದೆ.
ಗಂಡ ಮತ್ತು ಹೆಂಡತಿ ಇಬ್ಬರೂ ಪ್ರತ್ಯೇಕವಾಗಿ ಟ್ಯಾಕ್ಸ್ ಫೈಲ್ ಮಾಡುವ ಬದಲು ಜಂಟಿಯಾಗಿ ಐಟಿ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುತ್ತದೆ. ಜಂಟಿಯಾಗಿ ಸಲ್ಲಿಸಿದಾಗ ಹೆಚ್ಚಿನ ವಿನಾಯಿತಿಗಳು ಸಿಗುತ್ತವೆ. ಮೂಲ ಡಿಡಕ್ಷನ್ ಪ್ರಮಾಣ ಹೆಚ್ಚುತ್ತದೆ. ಸರ್ಚಾರ್ಜ್ ಮಿತಿ ಹೆಚ್ಚುತ್ತದೆ.
ಸದ್ಯ ಇರುವ ಪ್ರಸ್ತಾಪದ ಪ್ರಕಾರ, ಜಂಟಿ ಟ್ಯಾಕ್ಸೇಶನ್ನಲ್ಲಿ ಗಂಡ ಮತ್ತು ಹೆಂಡತಿ ಇಬ್ಬರ ಒಟ್ಟು ಆದಾಯದಲ್ಲಿ 8 ಲಕ್ಷ ರೂ ಟ್ಯಾಕ್ಸ್ ಎಕ್ಸೆಂಪ್ಷನ್ ಅಥವಾ ತೆರಿಗೆ ವಿನಾಯಿತಿ ಕೊಡಲಾಗುತ್ತದೆ. ಶೇ. 30 ತೆರಿಗೆ ಅನ್ವಯ ಆಗುವ ಆದಾಯ ಮಿತಿಯನ್ನು 48 ಲಕ್ಷ ರೂಗೆ ಏರಿಸಲಾಗಬಹುದು.
ಅಂದರೆ, ಕಳೆದ ವರ್ಷದ ಸ್ಲ್ಯಾಬ್ ದರದ ಪ್ರಕಾರ 24 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ಟ್ಯಾಕ್ಸ್ ಅನ್ವಯ ಆಗುತ್ತದೆ. ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಲ್ಲಿ 48 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ಟ್ಯಾಕ್ಸ್ ಅನ್ವಯ ಆಗಬಹುದು.
ಹಾಗೆಯೇ, ಈಗಿರುವ ವ್ಯವಸ್ಥೆಯಲ್ಲಿ 50 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಸರ್ಚಾರ್ಜ್ ಅನ್ವಯ ಆಗುತ್ತದೆ. ಶೇ. 10ರಿಂದ 25ರವರೆಗೂ ಸರ್ಚಾರ್ಜ್ ಇದೆ. ಜಾಯಿಂಟ್ ಟ್ಯಾಕ್ಸೇಶನ್ ಸಿಸ್ಟಂನಲ್ಲಿ ಸರ್ಚಾರ್ಜ್ 75 ಲಕ್ಷ ರೂ ಆದಾಯದಿಂದ ಶುರುವಾಗುತ್ತದೆ.



