ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಕರ್ನಾಟಕ ಈ ಬಾರಿ ದೊಡ್ಡ ಮಟ್ಟದ ಕೊಡುಗೆಯನ್ನು ನಿರೀಕ್ಷಿಸುತ್ತಿದೆ. ಮುಖ್ಯವಾಗಿ ಸಾರಿಗೆ, ನೀರಾವರಿ ಮತ್ತು ಕೈಗಾರಿಕಾ ವಲಯಗಳಿಗೆ ವಿಶೇಷ ಆದ್ಯತೆ ನೀಡುವಂತೆ ಒತ್ತಾಯಿಸಲಾಗಿದೆ.
ಹೈಸ್ಪೀಡ್ ರೈಲು: ಚೆನ್ನೈ-ಬೆಂಗಳೂರು-ಮೈಸೂರು ನಡುವಿನ ಹೈಸ್ಪೀಡ್ ರೈಲು ಯೋಜನೆಗೆ ಚಾಲನೆ ಸಿಗುವ ನಿರೀಕ್ಷೆಯಿದೆ. ಇದು ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಬೆಂಗಳೂರು ಮೆಟ್ರೋ ಹಂತ-೩: ಸಿಲಿಕಾನ್ ಸಿಟಿಯ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ನಮ್ಮ ಮೆಟ್ರೋದ 3ನೇ ಹಂತದ ವಿಸ್ತರಣೆಗೆ ಕೇಂದ್ರದ ವಿಶೇಷ ಆರ್ಥಿಕ ನೆರವನ್ನು ಕೋರಲಾಗಿದೆ.
ಉಪನಗರ ರೈಲು: ನಗರದ ಹೊರವಲಯದ ಸಂಪರ್ಕ ಸುಧಾರಿಸಲು ಬೆಂಗಳೂರು ಉಪನಗರ ರೈಲು ಯೋಜನೆಗೆ ವಿಶೇಷ ಅನುದಾನದ ನಿರೀಕ್ಷೆಯಿದೆ.
ಮೈಸೂರು-ಕುಶಾಲನಗರ ರೈಲು: ಮಲೆನಾಡು ಮತ್ತು ಕರಾವಳಿಯ ಸಂಪರ್ಕ ಕೊಂಡಿಯಾಗಿ ಹೊಸ ರೈಲು ಯೋಜನೆ ಘೋಷಣೆಯಾಗುವ ಸಾಧ್ಯತೆಯಿದೆ.
ರಾಷ್ಟ್ರೀಯ ಮಾನ್ಯತೆ: ಕೃಷ್ಣ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳಿಗೆ ‘ರಾಷ್ಟ್ರೀಯ ಯೋಜನೆ’ ಎಂಬ ಮಾನ್ಯತೆ ಸಿಕ್ಕರೆ, ಕೇಂದ್ರದಿಂದ ಹೆಚ್ಚಿನ ಧನಸಹಾಯ ಹರಿದು ಬರಲಿದೆ.
ಶಿರಾಡಿ ಸುರಂಗ ಮಾರ್ಗ: ಪಶ್ಚಿಮ ಘಟ್ಟದ ಸವಾಲಿನ ಹಾದಿಯಲ್ಲಿ ಸುಗಮ ಸಂಚಾರಕ್ಕಾಗಿ ಶಿರಾಡಿ ಘಾಟ್ ಸುರಂಗ ಮಾರ್ಗ ಯೋಜನೆಗೆ ಬಜೆಟ್‌ನಲ್ಲಿ ಒತ್ತು ನೀಡುವ ಸಾಧ್ಯತೆಯಿದೆ.
ಐಐಟಿ ಮತ್ತು ಏಮ್ಸ್: ಹಾಸನದಲ್ಲಿ ಐಐಟಿ (IIT) ಸ್ಥಾಪನೆ ಮತ್ತು ರಾಯಚೂರಿನಲ್ಲಿ ಬಹುಕಾಲದ ಬೇಡಿಕೆಯಾದ ಏಮ್ಸ್ (AIIMS) ಆಸ್ಪತ್ರೆಯ ಮಂಜೂರಾತಿಗಾಗಿ ರಾಜ್ಯವು ಕಾತರದಿಂದ ಕಾಯುತ್ತಿದೆ.
ಸಾಗರಮಾಲಾ ಯೋಜನೆ: ಕರ್ನಾಟಕದ ಬಂದರುಗಳ ನವೀಕರಣ ಮತ್ತು ಅಭಿವೃದ್ಧಿಗೆ ಸಾಗರಮಾಲಾ ಯೋಜನೆಯಡಿ ವಿಶೇಷ ಪ್ಯಾಕೇಜ್ ನಿರೀಕ್ಷಿಸಲಾಗಿದೆ.
ಮಂಡ್ಯ ಕೈಗಾರಿಕೋದ್ಯಮ: ಸಕ್ಕರೆ ನಾಡು ಮಂಡ್ಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.



