ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದು ಉದ್ಯಮ ವಲಯದಲ್ಲಿ ಅಪಾರ ನಿರೀಕ್ಷೆಗಳಿವೆ.ಈ ಬಾರಿ ಬಜೆಟ್‌ನಲ್ಲಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹೆಚ್ಚು ಹಣ ವ್ಯಯಿಸಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಸಂಕಷ್ಟಗಳ ನಡುವೆ ಆರ್ಥಿಕ ಬೆಳವಣಿಗೆಯ ವೇಗ ಹೆಚ್ಚಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಹಲವಾರು ಸೆಕ್ಟರ್ಗಳ ಮೂಲಸೌಕರ್ಯಕ್ಕಾಗಿ ಸರ್ಕಾರ ಬಹಳಷ್ಟು ಹಣ ವ್ಯಯಿಸಿತ್ತು. ಈ ಬಾರಿಯ ಬಜೆಟ್ನಲ್ಲೂ ಇದೇ ನಿಲುವು ಮುಂದುವರಿಯಬಹುದು ಎಂದು ಉದ್ಯಮ ವಲಯ ನಿರೀಕ್ಷಿಸುತ್ತಿದೆ.
ಭಾರತವು ಜಾಗತಿಕ ಆರ್ಥಿಕ ಪ್ರಬಲ ಶಕ್ತಿಯಾಗಬೇಕಾದರೆ ಈ ಬಜೆಟ್‌ನಲ್ಲಿ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ ಹೇಳಲಾಗಿದೆ. ಹೆದ್ದಾರಿ, ನಗರ ಸಾರಿಗೆ, ಸ್ಮಾರ್ಟ್ಸಿಟಿ ನಿರ್ಮಾಣ ಯೋಜನೆಗಳಲ್ಲಿ ಹೂಡಿಕೆ ಮಾಡಲು, ಹಾಗೂ ರಾಜ್ಯಗಳಿಗೆ ಬಡ್ಡಿರಹಿತ ಸಾಲ ಕೊಡಲು ಕಳೆದ ವರ್ಷದ ಬಜೆಟ್‌ನಲ್ಲಿ 1.5 ಲಕ್ಷ ಕೋಟಿ ರೂ ಹಣ ನೀಡಲಾಗಿತ್ತು. ಈ ಬಾರಿಯ ಬಜೆಟ್‌ನಲ್ಲಿ ಅದು 3 ಲಕ್ಷ ಕೋಟಿ ರೂಗೆ ಏರಿಸಬೇಕು ಎಂದು ತಜ್ಞರು ಸಲಹೆ ಕೊಟ್ಟಿದ್ದಾರೆ.



