ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಕರ್ನಾಟಕಕ್ಕೆ ಕೇಂದ್ರದಿಂದ ದೊರಕಬೇಕಾದ ಅನುದಾನಗಳ ಬಗ್ಗೆ ಸ್ಪಷ್ಟ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ರಾಜ್ಯಕ್ಕೆ ಸೇರಬೇಕಾದ ಜಿಎಸ್‌ಟಿ ಪಾಲು ತಕ್ಷಣ ಬಿಡುಗಡೆ ಆಗಬೇಕು ಹಾಗೂ ಹಿಂದೆಯೇ ಭರವಸೆ ನೀಡಿದ್ದ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಸಂಬಂಧಿಸಿದ ಹಣ ಇನ್ನೂ ರಾಜ್ಯಕ್ಕೆ ತಲುಪಿಲ್ಲ ಎಂದು ಹೇಳಿದರು. ಕೃಷಿ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕೇಂದ್ರದಿಂದ ನೀಡಬೇಕಾದ ಅನುದಾನಗಳು ಬಿಡುಗಡೆ ಆಗಬೇಕೆಂಬ ನಿರೀಕ್ಷೆ ನಮ್ಮದು ಎಂದು ತಿಳಿಸಿದರು. ಸರ್ಕಾರ ಇರುವುದೇ ಮುಖ್ಯವಲ್ಲ, ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡುವುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕವು ದೇಶದ ಆರ್ಥಿಕ ಬೆಳವಣಿಗೆಗೆ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್‌ಟಿ ಪಾವತಿಸುತ್ತಿದೆ ಎಂದು ಉಲ್ಲೇಖಿಸಿದ ಪರಮೇಶ್ವರ್, ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರವೂ ರಾಜ್ಯದೊಂದಿಗೆ ಸಹಕಾರ ತೋರಿಸಬೇಕು ಎಂದರು. ಬಜೆಟ್‌ನಲ್ಲಿ ಕೇಂದ್ರ ಏನು ಘೋಷಣೆ ಮಾಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲದಿದ್ದರೂ, ರಾಜ್ಯದ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನ್ಯಾಯಯುತ ಅನುದಾನ ನೀಡಬೇಕೆಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.



