ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ 2026ರಲ್ಲಿ ದಿವ್ಯಾಂಗರ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಹೆಜ್ಜೆ ಇಡಲಾಗಿದ್ದು, ಐಟಿ, ಎವಿಜಿಸಿ ಹಾಗೂ ಆತಿಥ್ಯ ವಲಯಗಳಲ್ಲಿ ಸಮಗ್ರ ಕೌಶಲ ತರಬೇತಿ ನೀಡುವ ಹೊಸ ಯೋಜನೆ ಘೋಷಿಸಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆಯ ಮೂಲಕ ದಿವ್ಯಾಂಗರಿಗೆ ಗೌರವಯುತ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸುವ ಗುರಿ ಸರ್ಕಾರದದ್ದೆಂದು ತಿಳಿಸಿದ್ದಾರೆ.
ಬಜೆಟ್ ಪ್ರಸ್ತಾವನೆಯಂತೆ, ಐಟಿ, ಅನಿಮೇಷನ್, ವಿಸುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್, ಜೊತೆಗೆ ಆತಿಥ್ಯ, ಆಹಾರ ಮತ್ತು ಪಾನೀಯ ವಲಯಗಳನ್ನು ದಿವ್ಯಾಂಗರಿಗೆ ಸೂಕ್ತ ಉದ್ಯೋಗ ಕ್ಷೇತ್ರಗಳಾಗಿ ಗುರುತಿಸಲಾಗಿದೆ. ಪ್ರತಿ ಉದ್ಯಮಕ್ಕೆ ಹೊಂದುವಂತೆ ವಿಶೇಷ ಹಾಗೂ ಪ್ರಾಯೋಗಿಕ ತರಬೇತಿ ನೀಡಲಾಗಿದ್ದು, ಉದ್ಯೋಗಾರ್ಹತೆ ಹೆಚ್ಚಿಸುವತ್ತ ಗಮನ ಹರಿಸಲಾಗಿದೆ.
ಇದೇ ವೇಳೆ ‘ದಿವ್ಯಾಂಗ ಸಹಾರಾ’ ಯೋಜನೆಯಡಿ ಸಹಾಯಕ ಸಾಧನಗಳ ಲಭ್ಯತೆಯನ್ನು ಸುಧಾರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಇನ್ನು ದಿವ್ಯಾಂಗರು ಹಾಗೂ ಹಿರಿಯ ನಾಗರಿಕರು ಸಹಾಯಕ ಉತ್ಪನ್ನಗಳನ್ನು ಖರೀದಿಸಲು ಅನುಕೂಲವಾಗುವಂತೆ, ಪಿಎಂ ದಿವ್ಯಾಶ ಕೇಂದ್ರಗಳನ್ನು ಬಲಪಡಿಸಿ ಆಧುನಿಕ ರಿಟೇಲ್ ಶೈಲಿಯ ‘ಸಹಾಯಕ ತಂತ್ರಜ್ಞಾನ ಮಾರ್ಟ್’ಗಳನ್ನು ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.



