ಹೊಸದಿಗಂತ ಡಿಜಿಟಲ್ ಡೆಸ್ಕ್:
2026–27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರವಾಸೋದ್ಯಮ ವಲಯವನ್ನು ಆರ್ಥಿಕ ಬೆಳವಣಿಗೆಯ ಪ್ರಮುಖ ಭಾಗವಾಗಿ ರೂಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ಆದಾಯ ಮತ್ತು ಸ್ಥಳೀಯ ಆರ್ಥಿಕತೆಯ ಬಲವರ್ಧನೆಗೆ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಬಜೆಟ್‌ನಲ್ಲಿ ಪ್ರಕೃತಿ ಆಧಾರಿತ ಹಾಗೂ ವನ್ಯಜೀವ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಲಾಗಿದ್ದು, ಕರ್ನಾಟಕ, ಒಡಿಶಾ ಮತ್ತು ಕೇರಳದ ಆಯ್ದ ಕರಾವಳಿ ಪ್ರದೇಶಗಳಲ್ಲಿ ‘ಟರ್ಟಲ್ ಟ್ರಯಲ್ಸ್’ ಅಥವಾ ಆಮೆ ಹಾದಿಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಘೋಷಿಸಲಾಗಿದೆ.
ಕರ್ನಾಟಕದ ಹೊನ್ನಾವರ, ಕಾರವಾರ ಮತ್ತು ಉಡುಪಿ ಸಮುದ್ರತೀರಗಳು ಈ ಯೋಜನೆಯ ಪ್ರಮುಖ ಭಾಗವಾಗಲಿದ್ದು, ಆಮೆಗಳ ಸಂರಕ್ಷಣೆಗೂ ಪ್ರವಾಸೋದ್ಯಮಕ್ಕೂ ಒಟ್ಟಿಗೆ ಉತ್ತೇಜನ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇದಕ್ಕೆ ಪೂರಕವಾಗಿ, ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಾವಿರಾರು ಪ್ರವಾಸ ಮಾರ್ಗದರ್ಶಕರಿಗೆ ಹೈಬ್ರಿಡ್ ತರಬೇತಿ ನೀಡಲು ಕೇಂದ್ರ ನಿರ್ಧರಿಸಿದೆ. ಜೊತೆಗೆ, ಆಯ್ದ ಪುರಾತತ್ವ ಮತ್ತು ಪರಂಪರೆ ತಾಣಗಳನ್ನು ಅನುಭವಾತ್ಮಕ ಸಾಂಸ್ಕೃತಿಕ ಕೇಂದ್ರಗಳಾಗಿ ರೂಪಿಸುವ ಗುರಿಯನ್ನೂ ಬಜೆಟ್ ಹೊಂದಿದೆ.
ಈ ಎಲ್ಲ ಕ್ರಮಗಳ ಮೂಲಕ ಭಾರತವನ್ನು ಸುಸ್ಥಿರ ಹಾಗೂ ಜಾಗತಿಕ ಪ್ರವಾಸಿ ತಾಣವಾಗಿ ರೂಪಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ.



