ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನ ಅಪಘಾತದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅಕಾಲಿಕವಾಗಿ ನಿಧನರಾದ ಬಳಿಕ, ಅವರ ಪತ್ನಿ ಸುನೇತ್ರಾ ಪವಾರ್ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಸ್ವೀಕಾರದ ಬಳಿಕ ಸುನೇತ್ರಾ ಪವಾರ್ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದು, ಅಜಿತ್ ಪವಾರ್ ಅವರು ತಮ್ಮ ಜೀವನವಿಡೀ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಹಿಂದುಳಿದ ವರ್ಗಗಳ ಹಿತಕ್ಕಾಗಿ ದುಡಿದಿದ್ದರು ಎಂದು ಅವರು ಸ್ಮರಿಸಿದರು.
ಅಜಿತ್ ಪವಾರ್ ಅವರ ಅಕಾಲಿಕ ಮರಣ ತಮ್ಮ ಜೀವನಕ್ಕೆ ಅಪಾರ ನೋವು ತಂದಿದ್ದರೂ, ಅವರು ಕಲಿಸಿದ ನಿಷ್ಠೆ ಮತ್ತು ಜನಸೇವೆಯ ತತ್ವವೇ ತಮ್ಮ ಶಕ್ತಿಯಾಗಿದೆ ಎಂದು ಸುನೇತ್ರಾ ಪವಾರ್ ಹೇಳಿದ್ದಾರೆ. ನ್ಯಾಯಯುತ ಮತ್ತು ಸಮಾನ ಮಹಾರಾಷ್ಟ್ರ ನಿರ್ಮಾಣದ ಕನಸನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಅವರಿಗೆ ಅಬಕಾರಿ, ಕ್ರೀಡೆ ಮತ್ತು ಯುವಜನ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ.



