ಹೊಸದಿಗಂತ ಡಿಜಿಟಲ್ ಡೆಸ್ಕ್:
2026–27ನೇ ಸಾಲಿನ ಕೇಂದ್ರ ಬಜೆಟ್ ದೇಶದ ಅಭಿವೃದ್ಧಿ ದಿಕ್ಕಿಗೆ ಹೊಸ ಆಯಾಮ ನೀಡಿದೆ. ಆರ್ಥಿಕ ಪ್ರಗತಿಯ ಜೊತೆಗೆ ಪ್ರಕೃತಿ ಸಂರಕ್ಷಣೆಗೆ ಮಹತ್ವ ನೀಡಿರುವ ಸರ್ಕಾರದ ನಿಲುವು ಹಲವು ವಲಯಗಳಿಂದ ಮೆಚ್ಚುಗೆ ಪಡೆದಿದ್ದು, ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಬಜೆಟ್ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.
ಮಹಿಳೆಯರ ಹಿತದೃಷ್ಟಿಯಿಂದ ಪ್ರತಿಯೊಂದು ಜಿಲ್ಲೆಯಲ್ಲಿ ಹಾಸ್ಟೆಲ್‌ಗಳ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನು ಬಜೆಟ್ ಒಳಗೊಂಡಿದೆ ಎಂದು ಹೇಳಿದರು. ಆಯುರ್ವೇದ ಮತ್ತು ಯೋಗದಂತಹ ಭಾರತೀಯ ಸಾಂಸ್ಕೃತಿಕ ಪರಂಪರೆಗೂ ಈ ಬಜೆಟ್‌ನಲ್ಲಿ ಮಹತ್ವ ನೀಡಲಾಗಿದೆ ಎಂದು ಅವರು ಪ್ರಶಂಸಿಸಿದರು.
ಹಿಮಾಚಲ ಪ್ರದೇಶ ಹಾಗೂ ಈಶಾನ್ಯ ಭಾರತದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿರುವುದನ್ನು ಕಂಗನಾ ವಿಶೇಷವಾಗಿ ಉಲ್ಲೇಖಿಸಿದರು. “ಹಿಮಾಚಲ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಟ್ರೆಕ್ಕಿಂಗ್, ಹೈಕಿಂಗ್‌ನಂತಹ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಉತ್ತೇಜಿಸುವ ಯೋಜನೆಗಳು ನಿಜಕ್ಕೂ ಕ್ರಾಂತಿಕಾರಿ ಚಿಂತನೆಯ ಪ್ರತೀಕ. ಪ್ರವಾಸೋದ್ಯಮದ ಮೇಲೆ ಕೇಂದ್ರೀಕೃತ ಗಮನ ನಮಗೆಲ್ಲ ದೊಡ್ಡ ಸಮಾಧಾನ ನೀಡುತ್ತದೆ. ಈ ಘೋಷಣೆಗಳು ಪ್ರವಾಸೋದ್ಯಮದ ಜೊತೆಗೆ ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ” ಎಂದು ಹೇಳಿದರು.
ಕೃಷಿ ಮತ್ತು ಹಿಮಾಚಲ ಪ್ರದೇಶದಲ್ಲಿ ದೊರೆಯುವ ವಿವಿಧ ಬಗೆಯ ಬೀಜ-ಹಣ್ಣುಗಳಂತಹ ಉತ್ಪನ್ನಗಳನ್ನೂ ಬಜೆಟ್ ಸಮಗ್ರವಾಗಿ ಒಳಗೊಂಡಿದೆ ಎಂದು ಅವರು ಅಭಿಪ್ರಾಯಪಟ್ಟರು. “ಈ ಬಜೆಟ್ ಸುಂದರವಾಗಿ ಹಾಗೂ ಸಮಗ್ರವಾಗಿ ಮಂಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು” ಎಂದರು.



