ಹೊಸದಿಗಂತ ಡಿಜಿಟಲ್ ಡೆಸ್ಕ್
2026-27ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಇರಾನ್‌ನ ಚಾಬಹಾರ್ ಬಂದರು ಅಭಿವೃದ್ಧಿಗೆ ಅನುದಾನ ಹಂಚಿಕೆ ಮಾಡದಿರುವುದು ಎಲ್ಲರ ಗಮನ ಸೆಳೆದಿದೆ.
2026ರ ಕೇಂದ್ರ ಬಜೆಟ್‌ನಲ್ಲಿ ಭಾರತವು ಚಾಬಹಾರ್ ಬಂದರು ಯೋಜನೆಗೆ ಯಾವುದೇ ಹಂಚಿಕೆಯನ್ನು ಮಾಡಿಲ್ಲ. ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಇರಾನ್ ಮೇಲಿನ ಅಮೆರಿಕದ ನಿರ್ಬಂಧಗಳ ಬಗ್ಗೆ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದಂತಿದೆ.
ಹಲವಾರು ವರ್ಷಗಳಿಂದ ದೆಹಲಿಯು ಇರಾನ್‌ನ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದ ದಕ್ಷಿಣ ಕರಾವಳಿಯಲ್ಲಿರುವ ಪ್ರಮುಖ ಸಂಪರ್ಕ ಯೋಜನೆಯಾದ ಚಾಬಹಾರ್‌ನ ಅಭಿವೃದ್ಧಿಗಾಗಿ ವಾರ್ಷಿಕ 100 ಕೋಟಿ ರೂ. ಅನುದಾನ ಹಂಚಿಕೆ ಮಾಡುತ್ತಿತ್ತು. ಭಾರತವು ಈ ಬಂದರಿನ ಅಭಿವೃದ್ಧಿಯಲ್ಲಿ ಪ್ರಮುಖ ಪಾಲುದಾರನಾಗಿದ್ದು, ಇದು ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಮತ್ತು ಅದರಾಚೆಗಿನ ಪ್ರಾದೇಶಿಕ ವ್ಯಾಪಾರ ಮತ್ತು ಕಾರ್ಯತಂತ್ರದ ಸಂಪರ್ಕದ ಪ್ರಮುಖ ಭಾಗವಾಗಿದೆ.
ಚಾಬಹಾರ್ ಇರಾನ್‌ನ ಮೊದಲ ಆಳ ನೀರಿನ ಬಂದರು ಆಗಿದ್ದು,ಒಮಾನ್ ಕೊಲ್ಲಿಯ ಮುಖಭಾಗದಲ್ಲಿದ್ದು, ಇದು ಆ ದೇಶಕ್ಕೆ ಜಾಗತಿಕ ಕಡಲ ವ್ಯಾಪಾರ ಮಾರ್ಗಗಳಿಗೆ ನೇರ ಪ್ರವೇಶವನ್ನು ನೀಡುತ್ತದೆ. ಈ ಬಂದರು ಪಾಕಿಸ್ತಾನದೊಂದಿಗಿನ ಇರಾನ್‌ನ ಗಡಿಯ ಪಶ್ಚಿಮದಲ್ಲಿದೆ. ಪಾಕಿಸ್ತಾನದ ಗ್ವಾದರ್ ಬಂದರು ಚೀನಾ ಬೆಲ್ಟ್ ಆ್ಯಂಡ್ ರೋಡ್ ಇನಿಶಿಯೇಟಿವ್ (BRI) ನ ಭಾಗವಾಗಿ ಅಭಿವೃದ್ಧಿಪಡಿಸಿದರೆ, ಚಾಬಹಾರ್ ಬಂದರು ಅಭಿವೃದ್ಧಿಯಲ್ಲಿ ಭಾರತ ತನ್ನದೇ ಆದ ಕೊಡುಗೆ ನೀಡುತ್ತಿದೆ.
2002 ಭಾರತ ಮತ್ತು ಇರಾನ್ ನಡುವೆ ಮಾತುಕತೆ ಆರಂಭಗೊಂಡಿದ್ದು, 2003ರಲ್ಲಿ ಅಂದಿನ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಇರಾನ್ ಅಧ್ಯಕ್ಷ ಖತಾಮಿ ಅವರ ಸಮ್ಮುಖದಲ್ಲು ಸಹಕಾರ ಮಾರ್ಗಸೂಚಿಗೆ ಸಹಿ ಹಾಕಲಾಯಿತು. ಚಾಬಹಾರ್‌ನ್ನು ಭಾರತ-ಇರಾನ್ ನಡುವಿನ ಪ್ರಮುಖ ಯೋಜನೆ ಎಂದು ಪರಿಗಣಿಸಲಾಗುತ್ತದೆ.
1996ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಭಾರತ ಮತ್ತು ಇರಾನ್ ನಡುವಿನ ಸಹಕಾರವು ಗಾಢವಾಯಿತು. ಎರಡೂ ದೇಶಗಳು ಪಾಕಿಸ್ತಾನ ಬೆಂಬಲಿತ ಸುನ್ನಿ ಭಯೋತ್ಪಾದನೆಯನ್ನು ವಿರೋಧಿಸಿದವು. ಅಫ್ಘಾನಿಸ್ತಾನ ಭೂ ಪ್ರವೇಶಕ್ಕೆ ಪಾಕಿಸ್ತಾನದ ದಿಗ್ಬಂಧನವನ್ನು ಜಯಿಸಲು, ಭಾರತದವ ಪರ್ಯಾಯ ಮಾರ್ಗಗಳ ಹುಡುಕಾಟ ಆರಂಭಿಸಿ, ಚಾಬಹಾರ್ ಬಂದರು ಅಭಿವೃದ್ಧಿಯಲ್ಲಿ ಪಾಲುದಾರನಾಗುವ ನಿರ್ಧಾರ ಮಾಡಿತು.



