February 2, 2026
Monday, February 2, 2026
spot_img

ಐಟಿ ದಾಳಿ ವೇಳೆ ಸಿ.ಜೆ ರಾಯ್ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಕೇರಳ ಸಿಎಂ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಆದಾಯ ತೆರಿಗೆ ಶೋಧ ಕಾರ್ಯಾಚರಣೆ ವೇಳೆ ಆತ್ಮಹತ್ಯೆಗೆ ಒಳಗಾದ ರಿಯಲ್​ ಎಸ್ಟೇಟ್​ ಉದ್ಯಮಿ ಸಿಜೆ ರಾಯ್​ ಸಾವಿನ ಕುರಿತು ನ್ಯಾಯಾಂಗ ತನಿಖೆಗೆ ಕೋರಿ ಕೇರಳ ಸಿಎಂ ಪಿಣರಾಯಿ ವಿಜಯನ್​ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್​ ಅವರಿಗೆ ಪತ್ರ ಬರೆದಿರುವ ಅವರು​, ಈ ಘಟನೆ ಒಂದು ಕಪ್ಪು ಚುಕ್ಕೆಯಾಗಿದ್ದು, ಶೋಧ ಕಾರ್ಯಾಚರಣೆಯಲ್ಲಿ ಗಂಭೀರ ಲೋಪಗಳಿವೆ ಎಂದು ತಿಳಿಸಿದ್ದಾರೆ.

ರಾಯ್​ ಅವರ ಸಹೋದರ ಕೂಡ ಐಟಿ ಅಧಿಕಾರಿಗಳಿಂದ ಕಿರುಕುಳ ಆಗಿರುವ ಕುರಿತು ಆರೋಪಿಸಿದ್ದಾರೆ. ನನ್ನ ಸಹೋದರ ಎಲ್ಲಾ ದಾಖಲೆಗಳನ್ನು ನೀಡಿ ಸಹಕಾರ ನೀಡಿದ್ದರು. ಆದರೂ ಅಧಿಕಾರಿಗಳು ಮರಳಿ ಶೋಧ ಕಾರ್ಯ ನಡೆಸುತ್ತಿದ್ದರು. ಐಟಿ ಅಧಿಕಾರಿಗಳ ದಾಳಿಯು ಅಸಹನೀಯವಾಗಿದೆ ಎಂದು ಹೇಳಿದ್ದರು ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತೆರಿಗೆ ವಂಚನೆ ಗಂಭೀರ ಸಮಸ್ಯೆಯಾಗಿದ್ದು, ಅದನ್ನು ನಿಗ್ರಹಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕಿದೆ. ರಾಯ್ ಪ್ರಕರಣದಲ್ಲಿ ಸಂಭವಿಸಿದಂತೆ ಜೀವ ಹಾನಿಯಾಗುವ ಯಾವುದೇ ಕ್ರಮವನ್ನು ನಾಗರಿಕ ಪ್ರಜಾಪ್ರಭುತ್ವದಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದು ಕೇರಳ ಸಿಎಂ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಅದೇ ಸ್ಥಳದಲ್ಲಿ ವ್ಯಕ್ತಿಯೊಬ್ಬರು ಬಂದೂಕಿನಿಂದ ಆತ್ಮಹತ್ಯೆಗೆ ಒಳಗಾಗುವುದು ಅಚ್ಚರಿಯಾಗಿದೆ. ಇಂತಹ ಕಾರ್ಯಾಚರಣೆ ಸಂದರ್ಭದಲ್ಲಿ ತೆರಿಗೆ ಅಧಿಕಾರಿಗಳ ನಿಯಂತ್ರಣದಲ್ಲಿ ಆ ಸ್ಥಳ ಇರಬೇಕು. ಅಧಿಕಾರಿಗಳ ಈ ಕಾರ್ಯಾಚರಣೆ ಸುಗಮವಾಗಿ ನಡೆಸಬೇಕು ಎಂಬುದು ಅವರ ಕನಿಷ್ಠ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಾಚರಣೆ ವೇಳೆ, ಶೋಧನೆಗೆ ಒಳಗಾಗುತ್ತಿರುವ ವ್ಯಕ್ತಿಯ ಕೆಲವು ಹಕ್ಕುಗಳನ್ನು ರಕ್ಷಿಸಬೇಕಿದೆ. ಅದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಇದನ್ನು ಅವರು ಪೂರೈಸಬೇಕಿದೆ. ತೆರಿಗೆ ಎಂಬುದು ನಾಗರಿಕರು ಪಾವತಿಸುವ ಬೆಲೆ ಎಂದು ಹೇಳಲಾಗುತ್ತದೆ. ಆದ್ದರಿಂದ ತೆರಿಗೆ ವಂಚನೆಗೆ ಶೂನ್ಯ ಸಹಿಷ್ಣುತೆ ಇರಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !