ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಈಗ ಎಲ್ಲರ ಕಣ್ಣು ಆಕಾಶದತ್ತ ನೆಟ್ಟಿದೆ! ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಸುತ್ತಮುತ್ತ ಹೆಲಿಕಾಪ್ಟರ್ ಸದ್ದು ಮಾಡುತ್ತಿರುವುದು ಕೇವಲ ಹಾರಾಟಕ್ಕಲ್ಲ, ಬದಲಾಗಿ ಭೂಮಿಯ ಆಳದಲ್ಲಿ ಅಡಗಿರುವ ‘ಬಂಗಾರದ ನಿಧಿ’ಯನ್ನು ಪತ್ತೆಹಚ್ಚಲು.
ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ವತಿಯಿಂದ ಅತ್ಯಾಧುನಿಕ ‘ಏರಿಯಲ್ ಸರ್ವೆ’ ಆರಂಭವಾಗಿದೆ. ಹೆಲಿಕಾಪ್ಟರ್‌ಗೆ ಅಳವಡಿಸಲಾದ ಸೆನ್ಸರ್ ಹಾಗೂ ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳ ಮೂಲಕ ಭೂಗರ್ಭದಲ್ಲಿ ಅಡಗಿರುವ ಖನಿಜ ಸಂಪತ್ತನ್ನು ಗುರುತಿಸಲಾಗುತ್ತಿದೆ.
ಕೋಲಾರದ ಕೆಜಿಎಫ್ ಗಣಿ ಪ್ರದೇಶದ ಬೆಟ್ಟದ ಸಾಲುಗಳೇ ಚಿಕ್ಕಬಳ್ಳಾಪುರಕ್ಕೂ ಹಬ್ಬಿರುವುದು ಈ ಶೋಧಕ್ಕೆ ಪ್ರಮುಖ ಕಾರಣ. ಈ ಹಿಂದೆ ಬಾಗೇಪಲ್ಲಿ ಮತ್ತು ಗುಡಿಬಂಡೆಯ ಕೆಲವು ರೈತರ ಜಮೀನಿನ ಮಣ್ಣಿನಲ್ಲಿ ಚಿನ್ನದ ಕಣಗಳು ಪತ್ತೆಯಾಗಿದ್ದವು.
2019-20ರಲ್ಲೇ ನಡೆಸಲಾಗಿದ್ದ ಪ್ರಾಥಮಿಕ ಸರ್ವೆ ನೀಡಿದ ಸುಳಿವಿನ ಆಧಾರದ ಮೇಲೆ, ಈಗ ರಿಮೋಟ್ ಸೆನ್ಸಿಂಗ್ ಮೂಲಕ ಆಳವಾದ ಸಂಶೋಧನೆ ನಡೆಯುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಜಿ.ಪ್ರಭು ಅವರು, “ಮೇ 31ರವರೆಗೆ ಈ ಸರ್ವೆ ಮುಂದುವರಿಯಲಿದೆ. ಕೇವಲ ಚಿನ್ನ ಮಾತ್ರವಲ್ಲದೆ ಬೆಳ್ಳಿ, ತಾಮ್ರ ಹಾಗೂ ಕಬ್ಬಿಣದಂತಹ ಲೋಹಗಳ ಪತ್ತೆಗಾಗಿ ಈ ಕಾರ್ಯಾಚರಣೆ ನಡೆಯುತ್ತಿದೆ. ಹೆಲಿಕಾಪ್ಟರ್ ತೀರಾ ಕೆಳಮಟ್ಟದಲ್ಲಿ ಹಾರಾಟ ನಡೆಸುವುದರಿಂದ ಸಾರ್ವಜನಿಕರು ಆತಂಕ ಪಡಬೇಕಿಲ್ಲ” ಎಂದು ಮನವಿ ಮಾಡಿದ್ದಾರೆ.



