ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಿಫ್ಟ್ ನೊಳಗೆ ಗ್ಯಾಸ್ ಬಲೂನ್ ಗಳು ಸ್ಫೋಟಗೊಂಡ ಅಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮುಂಬೈನ ಉಪನಗರ ಗೋರೆಗಾಂವ್‌ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಓರ್ವ ಮಹಿಳೆ ಹಾಗು ಮತ್ತೋರ್ವ ವ್ಯಕ್ತಿ ಗ್ಯಾಸ್ ತುಂಬಿದ ಬಲೂನ್ ಗಳಿರುವ ಪಾಲಿಥಿನ್ ಕವರ್ ನೊಳಗಿರಿಸಿಕೊಂಡು ಬಂದಿದ್ದು, ಅತ್ತ ಮಹಿಳೆ ಲಿಫ್ಟ್ ಬಟನ್ ಒತ್ತುತ್ತಿದ್ದಂತೆಯೇ ವ್ಯಕ್ತಿ ಹಿಡಿದಿದ್ದ ಗ್ಯಾಸ್ ಬಲೂನ್ ಗಳು ಏಕಾಏಕಿ ಸ್ಫೋಟಗೊಂಡಿದೆ. ವ್ಯಕ್ತಿ ಮತ್ತು ಮಹಿಳೆ ಇಬ್ಬರಿಗೂ ಸುಟ್ಟ ಗಾಯಗಳಾಗಿದ್ದು, ಇಬ್ಬರೂ ಲಿಫ್ಟ್ ನಿಂದ ಹೊರಕ್ಕೆ ಜಿಗಿದಿದ್ದಾರೆ. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಈ ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವ್ಯಾಪಕ ವೈರಲ್ ಆಗುತ್ತಿದೆ. ಪೊಲೀಸರು ಬಲೂನ್ ಮಾರಾಟಗಾರ ಮತ್ತು ಬಲೂನ್ ಆರ್ಡರ್ ಮಾಡಿದ್ದ ನಿವಾಸಿಗಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.



