February 8, 2026
Sunday, February 8, 2026
spot_img

ಮೆಟ್ರೋ ದರ ಏರಿಕೆ ವಿರುದ್ಧ ಆಕ್ರೋಶ: ‘Mr. CM Cut the Drama’ ಟೀ ಶರ್ಟ್ ಧರಿಸಿ ಬಂದ ಸಂಸದ ಸೂರ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಟ್ರೋ ಟಿಕೆಟ್ ದರ ಏರಿಕೆ ಕುರಿತು ರಾಜ್ಯ ಸರ್ಕಾರ ಹಾಗೂ ಕೇಂದ್ರದ ನಡುವೆ ಜಟಾಪಟಿ ಮುಂದುವರೆದಿದೆ. ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ‘Mr CM, Cut the Drama’ (ಮುಖ್ಯಮಂತ್ರಿಗಳೇ, ನಾಟಕ ನಿಲ್ಲಿಸಿ) ಮತ್ತು ‘#FareHikeBeda’ (ದರ ಏರಿಕೆ ಬೇಡ) ಎಂಬ ಬರಹವಿರುವ ಟೀ-ಶರ್ಟ್ ಧರಿಸಿ ,ಆರ್.ವಿ. ರಸ್ತೆ ನಿಲ್ದಾಣದಲ್ಲಿ ಮೆಟ್ರೋ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು.

ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ ತೇಜಸ್ವಿ ಸೂರ್ಯ, ದರ ಏರಿಕೆಯಿಂದ ಜನರಿಗಾಗುತ್ತಿರುವ ತೊಂದರೆಗಳನ್ನು ಆಲಿಸಿದರು.

ಈ ವೇಳೆ ಯುವತಿಯೊಬ್ಬಳು ತನ್ನ ಅಳಲು ತೋಡಿಕೊಳ್ಳುತ್ತಾ, ‘ಸರ್, ಮನೆಯಿಂದ ಇಲ್ಲಿಗೆ ಬರಲು ಬಸ್ ರಶ್ ಇರುತ್ತದೆ, ಆಟೋಗೆ ಹತ್ತಿರ ಹತ್ತಿರ 50 ರೂ. ಕೊಡಬೇಕು. ಮೆಟ್ರೋಗೆ ದಿನಕ್ಕೆ 200 ರೂ. ದಾಟುತ್ತಿದೆ. ದಿನಕ್ಕೆ 250 ರೂ. ಕೇವಲ ಪ್ರಯಾಣಕ್ಕೆ ಹೋದರೆ ಬದುಕುವುದು ಹೇಗೆ? ಎಂದು ಪ್ರಶ್ನಿಸಿದರು. ಗಾರ್ಮೆಂಟ್ಸ್ ಕೆಲಸಗಾರರು ಹಾಗೂ ವಿದ್ಯಾರ್ಥಿಗಳ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದರು.

ಸಂಸದರು ಧರಿಸಿದ್ದ ಟೀ ಶರ್ಟ್ ಕೇವಲ ಘೋಷಣೆಗಳಿಗೆ ಸೀಮಿತವಾಗಿರಲಿಲ್ಲ. ಫೇರ್ ಫಿಕ್ಸೇಶನ್ ಕಮಿಟಿ (FFC) ಮುಂದೆ ರಾಜ್ಯ ಸರ್ಕಾರದ ಅಧಿಕಾರಿಗಳು ನೀಡಿರುವ ಹೇಳಿಕೆಗಳನ್ನು ಟೀ ಶರ್ಟ್ ಮೇಲೆ ಮುದ್ರಿಸಲಾಗಿತ್ತು. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ, ನಮ್ಮ ಬಳಿ ಹಣವಿಲ್ಲ, ಆದ್ದರಿಂದ ದರ ಏರಿಕೆ ಮಾಡಿ ಎಂದು ಅಧಿಕಾರಿಗಳ ಮೂಲಕ ಸಮಿತಿಗೆ ಹೇಳಿಸಲಾಗಿದೆ. ಉಪಮುಖ್ಯಮಂತ್ರಿಗಳು ಖಾಲಿ ಟ್ರಂಕ್ ಅಂತಾರಲ್ಲ, ಈಗ ಗೊತ್ತಾಗುತ್ತಿದೆ ಖಾಲಿ ಟ್ರಂಕ್ ಯಾರು ಅಂತ ಎಂದು ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಚರ್ಚಿಸಿರುವ ಬಗ್ಗೆ ಮಾಹಿತಿ ನೀಡಿದ ಸಂಸದ, ನಾಳೆಯಿಂದ ದರ ಏರಿಕೆ ಮಾಡಬಾರದು ಎಂದು ಕೇಂದ್ರ ಸಚಿವರು ಮೆಟ್ರೋ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರ ಸಮಿತಿ ಮರು ರಚನೆಗೂ ಸಿದ್ಧವಿದೆ. ಹೀಗಿದ್ದರೂ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ BMRCL ನಾಳೆ ದರ ಏರಿಕೆ ಮಾಡಿದರೆ, ನಾವು ಸುಮ್ಮನಿರುವುದಿಲ್ಲ. ಪ್ರತಿ ಮೆಟ್ರೋ ನಿಲ್ದಾಣದ ಮುಂದೆ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !