February 9, 2026
Monday, February 9, 2026
spot_img

ಗೋವಾ ರಸ್ತೆಗಳಲ್ಲಿ ಹೈ-ವೋಲ್ಟೇಜ್ ರೇಸಿಂಗ್ ಹಂಗಾಮಾ!: ಸ್ಟ್ರೀಟ್ ರೇಸಿಂಗ್‌ಗೆ ‘ಕಿಚ್ಚಾಸ್ ಕಿಂಗ್ಸ್’ ಪಡೆ ಸಜ್ಜು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಬ್ರವರಿ 14 ಮತ್ತು 15ರಂದು ಗೋವಾದ ರಸ್ತೆಗಳು ಕೇವಲ ಪ್ರವಾಸಿಗರ ತಾಣವಾಗಿರದೆ, ವೇಗದ ಹಸಿವು ತಣಿಸುವ ‘ಇಂಡಿಯನ್ ರೇಸಿಂಗ್ ಫೆಸ್ಟಿವಲ್’ಗೆ (IRF) ಸಾಕ್ಷಿಯಾಗಲಿವೆ. ಈ ಮಹತ್ವದ ರೇಸ್‌ಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡ ಸರ್ವಸನ್ನದ್ಧವಾಗಿದ್ದು, ತಂಡದ ಮಾಲೀಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ತಂಡದ ಸಿದ್ಧತೆ ಮತ್ತು ಸ್ಟ್ರೀಟ್ ರೇಸಿಂಗ್‌ನ ಸವಾಲುಗಳ ಬಗ್ಗೆ ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಸುದೀಪ್ ಅವರ ಪ್ರಕಾರ, ಮುಚ್ಚಿದ ಸರ್ಕ್ಯೂಟ್‌ಗಳಿಗಿಂತ ಬೀದಿಗಳಲ್ಲಿ ನಡೆಯುವ ರೇಸಿಂಗ್ ಸಂಪೂರ್ಣ ಭಿನ್ನ. “ಪರ್ಮನೆಂಟ್ ಟ್ರ್ಯಾಕ್‌ನಲ್ಲಿ ನಿಯಂತ್ರಣವಿರುತ್ತದೆ, ಆದರೆ ಸ್ಟ್ರೀಟ್ ರೇಸಿಂಗ್‌ನಲ್ಲಿ ಸಣ್ಣ ತಪ್ಪಿಗೂ ಜಾಗವಿಲ್ಲ. ಇದು ಕೇವಲ ವೇಗವಲ್ಲ, ಬದಲಾಗಿ ಚಾಲಕನ ಮಾನಸಿಕ ಸ್ಥಿತಿ ಮತ್ತು ಧೈರ್ಯದ ಪರಮ ಪರೀಕ್ಷೆ,” ಎಂದು ಅವರು ವಿಶ್ಲೇಷಿಸಿದ್ದಾರೆ. ನಗರದ ಹೃದಯಭಾಗದಲ್ಲಿ ರೇಸಿಂಗ್ ನಡೆಯುವುದರಿಂದ ಕ್ರೀಡೆಯು ಜನರಿಗೆ ಹತ್ತಿರವಾಗುತ್ತದೆ ಎಂಬುದು ಸುದೀಪ್ ಅವರ ಅಭಿಪ್ರಾಯ.

ಯಾವುದೇ ಹಳೆಯ ಡೇಟಾ ಇಲ್ಲದ ಈ ಹೊಸ ಸರ್ಕ್ಯೂಟ್‌ನಲ್ಲಿ ಗೆಲ್ಲಲು ಸುದೀಪ್ ಅವರು ನಾಲ್ಕು ಮಂದಿ ಅಂತರಾಷ್ಟ್ರೀಯ ಗುಣಮಟ್ಟದ ರೇಸರ್‌ಗಳನ್ನು ಕಣಕ್ಕಿಳಿಸಿದ್ದಾರೆ:

ಸಚೆಲ್ ರೊಟ್ಗೆ : ಯುರೋಪಿನ ಈ ಉದಯೋನ್ಮುಖ ತಾರೆ ಭಾರತೀಯ ರೇಸಿಂಗ್ ವ್ಯವಸ್ಥೆಯ ಮೇಲೆ ಭರವಸೆ ಇಟ್ಟು ತಂಡ ಸೇರಿದ್ದಾರೆ.

ರುಹಾನ್ ಆಳ್ವಾ: ಬೆಂಗಳೂರಿನ ಹೆಮ್ಮೆಯ ಹುಡುಗ, ಅತಿ ಕಿರಿಯ ವಯಸ್ಸಿನ ರೇಸ್ ವಿಜೇತ ಎಂಬ ಹೆಗ್ಗಳಿಕೆ ಇವನದ್ದು.

ಕೈಲ್ ಕುಮಾರನ್: ವಿಶ್ವಮಟ್ಟದ ಅನುಭವ ಹೊಂದಿರುವ ಕೈಲ್, ಸ್ಟ್ರೀಟ್ ರೇಸಿಂಗ್‌ಗೆ ಬೇಕಾದ ಶಾಂತತೆ ಮತ್ತು ಪಕ್ವತೆಯನ್ನು ತಂಡಕ್ಕೆ ತರುತ್ತಾರೆ.

ಜೆಮ್ ಹೆಪ್ವರ್ತ್: ಮೆಕ್ಲಾರೆನ್ ಟ್ರೋಫಿ ಖ್ಯಾತಿಯ ಜೆಮ್, ತಂಡದ ಏಕೈಕ ಮಹಿಳಾ ಚಾಲಕಿಯಾಗಿದ್ದು, ತಂಡದ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ.

“ಬೆಂಗಳೂರು ನಗರವು ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಗೆ ಹೆಸರುವಾಸಿ. ನಮ್ಮ ತಂಡವು ಅದೇ ಬೆಂಗಳೂರಿನ ಚೈತನ್ಯವನ್ನು ಗೋವಾ ಟ್ರ್ಯಾಕ್ ಮೇಲೆ ಪ್ರದರ್ಶಿಸಲಿದೆ,” ಎಂದು ಸುದೀಪ್ ಆಶಯ ವ್ಯಕ್ತಪಡಿಸಿದ್ದಾರೆ. ಹಳೆಯ ದಾಖಲೆಗಳಿಲ್ಲದ ಟ್ರ್ಯಾಕ್‌ನಲ್ಲಿ ಚಾಲಕರ ಅಂತಃಪ್ರಜ್ಞೆಯೇ ಗೆಲುವಿನ ದಾರಿಯಾಗಲಿದೆ ಎಂಬುದು ಅವರ ನಂಬಿಕೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !