ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಆಸ್ತಿಗಳನ್ನು ಬ್ಯಾಂಕ್ ಜಪ್ತಿ ಮಾಡಿದರೆ, ಇತ್ತ ಸಿನಿಮಾಗಳೂ ಇಲ್ಲದೆ ಕಂಗಾಲಾಗಿದ್ದಾರೆ. ಇದರ ನಡುವೆ ಚೆಕ್ ಬೌನ್ಸ್ ಪ್ರಕರಣ ದಿಂದ ಯಾವ ದಾರಿಯೂ ಕಾಣದೆ ತಿಹಾರ್ ಜೈಲಿಗೆ ಶರಣಾಗಿದ್ದಾರೆ.
ರಾಜ್‌ಪಾಲ್ ಯಾದವ್ 2010ರಲ್ಲಿ 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಉದ್ಯಮಿಯಿಂದ ಸಾಲ ಪಡೆದು ಸಿನಿಮಾ ನಿರ್ದೇಶನ ಮಾಡಿದ್ದರು. ಆದರೆ ಸಿನಿಮಾ ಯಶಸ್ಸು ಕಾಣಸಲಿಲ್ಲ. ಇತ್ತ ರಾಜ್‌ಪಾಲ್ ಯಾದವ್‌ಗೆ ಇತರ ಸಿನಿಮಾ ಅವಕಾಶಗಳೂ ಸಿಗಲಿಲ್ಲ. ಪರಿಣಾಮ ಈ ಸಾಲ ಬಡ್ಡಿ ಸೇರಿ 9 ಕೋಟಿ ರೂಪಾಯಿ ಆಗಿದೆ. ಮರುಪಾವತಿಗೆ ಹಲವು ಗಡುವು ನೀಡಿದರೂ ಪಾವತಿಸಲು ಸಾಧ್ಯವಾಗಲಿಲ್ಲ. ನ್ಯಾಯಾಲಯದಲ್ಲಿ ಹೆಚ್ಚುವರಿ ಸಮಯ ಕೇಳಿದರೂ ಮರುಪಾವತಿ ಸಾಧ್ಯವಾಗಿರಲಿಲ್ಲ.
ಬಳಿಕ ದೆಹಲಿ ಹೈಕೋರ್ಟ್ ರಾಜ್‌ಪಾಲ್ ಮನವಿಯನ್ನು ವಿಚಾರಣೆ ನಡೆಸಿ ಫೆಬ್ರವರಿ ನಾಲ್ಕರ ಒಳಗೆ ಸಾಲ ಮರುಪಾವತಿಸಲು ಸೂಚಿಸಿತ್ತು. ಆದರೆ ಫೆಬ್ರವರಿ ನಾಲ್ಕರಂದು ಮತ್ತೆ ಹೈಕೋರ್ಟ್‌ಗೆ ಮತ್ತಷ್ಟು ಸಮಯ ನೀಡುವಂತೆ ಮನವಿ ಮಾಡಿದ್ದರು. ಆದರೆ ಹೈಕೋರ್ಟ್ ಈ ಮನವಿ ತಿರಸ್ಕರಿಸಿತ್ತು. ಇದೇ ವೇಳೆ ರಾಜ್‌ಪಾಲ್ ಮಾಧ್ಯಮದ ಮುಂದೆ ಮಾತನಾಡಿದ್ದರು. ನನ್ನ ಬಳಿ ಶರಣಾಗುವುದು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದಿದ್ದರು.
ಸಾಲದ ಸುಳಿಯಲ್ಲಿರುವ ನನಗೆ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಬಾಲಿವುಡ್‌ನಲ್ಲಿ ಎಲ್ಲರೂ ವೈಯುಕ್ತಿಕ. ನೆರವು ನೀಡುವ ಗೆಳೆಯರು ಇಲ್ಲ. ಕೆಲಸವೇ ಸಿಗುತ್ತಿಲ್ಲ, ಇನ್ನು ನೆರವು ಹೇಗೆ. ನನ್ನ ಬಳಿ ಕೊನೆಯ ಆಯ್ಕೆ ಒಂದು ಉಳಿದಿದೆ. ಅದು ಪೊಲೀಸರಿಗೆ ಶರಣವಾಗುವುದು. ಇದನ್ನು ಬಿಟ್ಟರೆ ಬೇರೆ ಆಯ್ಕೆ ಇಲ್ಲ ಎಂದು ಕಣ್ಣೀರಿಡುತ್ತಲೇ ಹೇಳಿದ್ದರು.
ಸದ್ಯ ರಾಜ್‌ಪಾಲ್ ಯಾದವ್ ತಿಹಾರ್ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ರಾಜ್‌ಪಾಲ್ ಬ್ಯಾಂಕ್ ಸಾಲ ಮರುಪಾವತಿಸದ ಕಾರಣ ಮುಂಬೈನ ಶಹಜಾನಪುರದಲ್ಲಿದ್ದ ಮನೆ ಸೇರಿದಂತೆ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಮಾಡಲಾಗಿತ್ತು.
ಸಾಲದ ಮೇಲೆ ಸಾಲ ಮತ್ತೊಂದೆಡೆ ಬಾಲಿವುಡ್‌ನಿಂದ ಸಿನಿಮಾ ಕೆಲಸಗಳು ಇಲ್ಲ. ಯಾವುದೇ ಸಿನಿಮಾದಲ್ಲಿ ರಾಜ್‌ಪಾಲ್‌ಗೆ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಸಾಲ ಮರುಪಾವತಿಗಿಂತ ಜೀವನ ನಿರ್ವಹಣೆ ಕಷ್ಟವಾಗಿತ್ತು. ಮನೆ, ಆಸ್ತಿಗಳು ಮುಟ್ಟುಗೋಲಾಗಿದೆ. ಹೀಗಾಗಿ ರಾಜ್‌ಪಾಲ್ ಹಾಗೂ ಕುಟುಂಬ ಬೀದಿಗೆ ಬಿದ್ದಿದೆ.



