ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯ ಪೀಠದಲ್ಲಿ ಬಿರುಗಾಳಿ ಎದ್ದಿದೆ. ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸುವ ಮೂಲಕ ಅವರ ಪದಚ್ಯುತಿ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿವೆ. ಈ ಮಹತ್ವದ ಬೆಳವಣಿಗೆಯ ಕುರಿತು ಬಜೆಟ್ ಅಧಿವೇಶನದ ಎರಡನೇ ಹಂತದ ಮೊದಲ ದಿನವಾದ ಮಾರ್ಚ್ 9 ರಂದು ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.
ವಿಪಕ್ಷಗಳ ಗಂಭೀರ ಆರೋಪಗಳೇನು?
ಕಲಾಪದ ವೇಳೆ ಸ್ಪೀಕರ್ ಕೇವಲ ಆಡಳಿತ ಪಕ್ಷಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.
ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಸೂಕ್ತ ಅವಕಾಶ ನೀಡುತ್ತಿಲ್ಲ.
ಪ್ರಧಾನಿ ಮೋದಿ ವಿರುದ್ಧದ ಪ್ರತಿಭಟನೆಗಳನ್ನು ಹತ್ತಿಕ್ಕಲು ಉದ್ದೇಶಪೂರ್ವಕವಾಗಿ ಕಲಾಪವನ್ನು ಬಳಸಿಕೊಳ್ಳಲಾಗುತ್ತಿದೆ.
ಅವಿಶ್ವಾಸ ನಿರ್ಣಯ ಮಂಡನೆಯಾಗಿರುವ ಹಿನ್ನೆಲೆಯಲ್ಲಿ, ನೈತಿಕ ಹೊಣೆ ಹೊತ್ತು ನಿರ್ಧಾರವಾಗುವವರೆಗೂ ಕಲಾಪದ ಅಧ್ಯಕ್ಷತೆಯಿಂದ ಹಿಂದೆ ಸರಿಯುವಂತೆ ವಿಪಕ್ಷಗಳು ಒತ್ತಾಯಿಸಿವೆ. ಇದಕ್ಕೆ ಸ್ಪಂದಿಸಿರುವ ಓಂ ಬಿರ್ಲಾ ಅವರು, ತಮ್ಮ ಮೇಲಿನ ಆರೋಪ ಇತ್ಯರ್ಥವಾಗುವವರೆಗೆ ಸ್ಪೀಕರ್ ಸ್ಥಾನದಲ್ಲಿ ಕೂರದೇ ಇರಲು ನಿರ್ಧರಿಸಿದ್ದಾರೆ ಎಂದು ಲೋಕಸಭಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಮಂಗಳವಾರ ಮಂಡಿಸಿದ ಈ ನಿರ್ಣಯಕ್ಕೆ ಈಗಾಗಲೇ 118 ಸಂಸದರು ಸಹಿ ಹಾಕಿದ್ದು, ವಿಪಕ್ಷಗಳು ಒಗ್ಗಟ್ಟಿನ ಪ್ರದರ್ಶನಕ್ಕೆ ಮುಂದಾಗಿವೆ. ಮಾರ್ಚ್ 9ರ ಚರ್ಚೆಯು ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಕೇಂದ್ರ ಸರ್ಕಾರ ಈ ಸವಾಲನ್ನು ಹೇಗೆ ಎದುರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.



