February 12, 2026
Thursday, February 12, 2026
spot_img

ಆ ಸ್ಟಾರ್ ನಟನಿಂದ ನನ್ನ ಕೆರಿಯರ್‌ಗೆ ಕೊಡಲಿ ಪೆಟ್ಟು ಬಿತ್ತು: ‘ಅಣ್ಣಯ್ಯ’ ಚಿತ್ರದ ನಟಿಯ ನೋವಿನ ಮಾತು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ಹಿಟ್ ಸಿನಿಮಾ ‘ಅಣ್ಣಯ್ಯ’ ಎಲ್ಲರಿಗೂ ನೆನಪಿರುವ ಸಿನಿಮಾ. ಆ ಸಿನಿಮಾದಲ್ಲಿ ಅಣ್ಣಯ್ಯನ ತಾಯಿಯಾಗಿ ನಟಿಸಿದವರು ಬಾಲಿವುಡ್‌ನ ಹಿರಿಯ ನಟಿ ಅರುಣಾ ಇರಾನಿ.

ಇದೀಗ ಅರುಣಾ ಇರಾನಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಬಾಲಿವುಡ್‌ನ ಅಂದಿನ ಖ್ಯಾತ ಹಾಸ್ಯ ನಟ ಮೆಹಮೂದ್ ಅಲಿ ಅವರು ತಮ್ಮ ಜೀವನವನ್ನು ರೂಪಿಸಿದಷ್ಟೇ ವೇಗವಾಗಿ ಹೇಗೆ ಹಾಳು ಮಾಡಿದರು ಎಂಬುದನ್ನು ಹೇಳಿದ್ದಾರೆ.

ಬಾಲಿವುಡ್‌ನ ಹಾಸ್ಯ ಚಕ್ರವರ್ತಿ ಎಂದೇ ಹೆಸರಾಗಿದ್ದ ಮೆಹಮೂದ್ ಅಲಿ ಮತ್ತು ಅರುಣಾ ಇರಾನಿ ನಡುವೆ ದಶಕಗಳ ಕಾಲ ಸಂಬಂಧವಿತ್ತು.

‘ಔಲಾದ್’, ‘ಹಮ್ಜೋಲಿ’ ಮತ್ತು ‘ನಯಾ ಜಮಾನಾ’ ಅಂತಹ ದೊಡ್ಡ ಸಿನಿಮಾಗಳಲ್ಲಿ ಅರುಣಾ ಅವರಿಗೆ ಅವಕಾಶ ಕೊಡಿಸಿ, ಅವರು ಬೆಳೆಯಲು ಮೆಹಮೂದ್ ಕಾರಣರಾದರು. ಆ ಸಮಯದಲ್ಲಿ ಮೆಹಮೂದ್ ನನಗೆ ಕೇವಲ ಮಾರ್ಗದರ್ಶಕರಾಗಿರಲಿಲ್ಲ, ನನ್ನ ಸರ್ವಸ್ವವಾಗಿದ್ದರು ಎಂದು ಅರುಣಾ ನೆನಪಿಸಿಕೊಂಡಿದ್ದಾರೆ.

ಆದರೆ, ಈ ಪ್ರೀತಿ ಮತ್ತು ಸಹಕಾರದ ಹಿಂದೆ ಒಂದು ಕರಾಳ ನೆರಳು ಕೂಡ ಇತ್ತು. ಅರುಣಾ ಮತ್ತು ಮೆಹಮೂದ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಅಂದು ಬಾಲಿವುಡ್‌ನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಆಗ ನಾನು ಯಾವುದೇ ಪತ್ರಿಕಾಗೋಷ್ಠಿ ನಡೆಸಿ ,ಆ ಸುದ್ದಿ ಹಬ್ಬಿದಾಗ ಅದನ್ನು ನಿರಾಕರಿಸುವ ಧೈರ್ಯ ನನಗಿರಲಿಲ್ಲ. ಅಚ್ಚರಿಯೆಂದರೆ, ಮೆಹಮೂದ್ ಕೂಡ ಆ ವದಂತಿಯನ್ನು ಎಲ್ಲೂ ಸುಳ್ಳು ಎಂದು ಹೇಳಲಿಲ್ಲ.ಇದರಿಂದಾಗಿ ಇತರ ನಿರ್ಮಾಪಕರು ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಅಥವಾ ಮೆಹಮೂದ್ ಅಪ್ಪಣೆ ಇಲ್ಲದೆ ಕೆಲಸ ಮಾಡುವುದಿಲ್ಲ ಎಂದು ಭಾವಿಸಿದರು. ಹೀಗಾಗಿ ನನಗೆ ಬರುತ್ತಿದ್ದ ಹಲವು ಅವಕಾಶಗಳು ಕೈತಪ್ಪಿದವು ಎಂದು ಅವರು ನೋವಿನಿಂದ ಹೇಳಿದ್ದಾರೆ.
ಹೀಗಾಗಿ ಮೆಹಮೂದ್ ನನ್ನನ್ನು ಬೆಳೆಸಿದರು ನಿಜ, ಆದರೆ ಅದೇ ಮೆಹಮೂದ್ ಅವರ ಮೌನ ನನ್ನ ಕೆರಿಯರ್‌ಗೆ ಕೊಡಲಿ ಪೆಟ್ಟು ನೀಡಿತು ಎಂದು ಹೇಳಿಕೊಂಡಿದ್ದಾರೆ.

ನಾನು ಅವರ ಮೇಲೆ ಎಷ್ಟು ಅವಲಂಬಿತಳಾಗಿದ್ದೆ ಎಂದರೆ, ಅವರು ಏನು ಹೇಳಿದರೂ ಕೇಳುತ್ತಿದ್ದೆ. ಬಡತನದಿಂದ ಬಂದಿದ್ದ ನನಗೆ ಹಣ ಮತ್ತು ಜನಪ್ರಿಯತೆ ಸಿಕ್ಕಾಗ ನಾನು ಸ್ಥಿಮಿತ ಕಳೆದುಕೊಂಡಿದ್ದೆ. ಮೆಹಮೂದ್ ಆಗಲೇ ಎರಡು ಮದುವೆಯಾಗಿದ್ದರು. ಆದರೂ ನಾನು ಅವರನ್ನು ಮದುವೆಯಾಗಲು ಬಯಸಿದ್ದೆ. ಅವರು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಆದರೆ ಕೊನೆಯಲ್ಲಿ ಕೈಕೊಟ್ಟರು. ಒಂದು ವೇಳೆ ನಾನು ಅವರನ್ನು ಮದುವೆಯಾಗಿದ್ದರೆ ನನ್ನ ಜೀವನ ಮತ್ತಷ್ಟು ನರಕವಾಗುತ್ತಿತ್ತು, ಹಾಗಾಗಿ ಅವರು ಮದುವೆಯಾಗದಿರುವುದೇ ಒಳ್ಳೆಯದಾಯಿತು ಎಂದು ನೋವಿನಿಂದಲೇ ನುಡಿದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !