October 18, 2026
Sunday, October 18, 2026
spot_img

ಸಾವಿನ ಹೆದ್ದಾರಿಯಾದ ಹೊಸಕೋಟೆ: ಅತಿವೇಗಕ್ಕೆ ಬಲಿಯಾದ ಏಳು ಜೀವಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಸರಣಿ ಅಪಘಾತವು ಏಳು ಜನರ ಬದುಕನ್ನು ಕ್ಷಣಮಾತ್ರದಲ್ಲಿ ಅಂತ್ಯಗೊಳಿಸಿದೆ. ತಾಲೂಕಿನ ಎಂ. ಸತ್ಯವರ ಗ್ರಾಮದ ಸಮೀಪ ಈ ದುರ್ಘಟನೆ ನಡೆದಿದ್ದು, ಅತಿವೇಗವೇ ಈ ಸಾವಿನ ಸರಣಿಗೆ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ.

ವೇಗವಾಗಿ ಬಂದ ಎಕ್ಸ್‌ಯುವಿ ಕಾರೊಂದು ಮೊದಲು ತನ್ನ ಮುಂದೆ ಚಲಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ಕಳೆದುಕೊಂಡ ಕಾರು, ನಂತರ ಎದುರಿನಿಂದ ಬಂದ ಕ್ಯಾಂಟರ್ ವಾಹನಕ್ಕೆ ನೇರವಾಗಿ ಗುದ್ದಿದೆ. ಈ ಭೀಕರ ಸಂಘರ್ಷದ ಪರಿಣಾಮವಾಗಿ ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟವರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ಮೂಲದವರೆಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಚಂದ್ರಕಾಂತ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

“ಮೇಲ್ನೋಟಕ್ಕೆ ಅತಿವೇಗ ಮತ್ತು ಅಜಾಗರೂಕತೆಯೇ ಈ ದುರಂತಕ್ಕೆ ಕಾರಣವೆಂದು ಕಂಡುಬರುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read