ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಪ್ರಧಾನಿ ಕಚೇರಿ ಮತ್ತು ವಿವಿಧ ಸಚಿವಾಲಯಗಳ ನೂತನ ಕಚೇರಿ ‘ಸೇವಾ ತೀರ್ಥ’ ಮತ್ತು ‘ಕರ್ತವ್ಯ ಭವನ’ 1 ಮತ್ತು 2 ಕಟ್ಟಡವನ್ನು ಇಂದು ಪ್ರಧಾನಿ ಮೋದಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂದು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಹೊಸ ಆರಂಭಕ್ಕೆ ಸಾಕ್ಷಿಯಾಗಿದೆ. ನಾವೆಲ್ಲರೂ ‘ವಿಕಸಿತ ಭಾರತ’ ಸಾಧಿಸುವ ಸಂಕಲ್ಪದೊಂದಿಗೆ ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ಪ್ರವೇಶಿಸುತ್ತಿದ್ದೇವೆ. ಗುರಿ ಸಾಧಿಸುವ ದೈವಿಕ ಆಶೀರ್ವಾದ ನಮ್ಮ ಮೇಲಿದೆ ಎಂದು ಹೇಳಿದರು.
ಈ ನೂತನ ಕಟ್ಟಡಗಳು ಜನ ಕೇಂದ್ರಿತ ಆಡಳಿತ ಮತ್ತು ದೇಶದ ಪ್ರಗತಿಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಪ್ರತಿಪಾದಿಸಿದರು.
ಸೌಥ್ ಬ್ಲಾಕ್ ಮತ್ತು ನಾರ್ಥ್ ಬ್ಲಾಕ್‌ನಂತಹ ಕಟ್ಟಡಗಳಲ್ಲಿ ಪ್ರಮುಖ ನೀತಿಗಳನ್ನು ರಚಿಸಲಾಗಿದೆ. ಬ್ರಿಟಿಷ್ ಸಾಮ್ರಾಜ್ಯದ ಸಂಕೇತದಂತೆ ಈ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಬ್ರಿಟಿಷ್ ಪ್ರಾಬಲ್ಯ ಬಲಪಡಿಸಿ, ಭಾರತವನ್ನು ತಲೆಮಾರುಗಳವರೆಗೆ ಅಧೀನ ಸ್ಥಿತಿಯಲ್ಲಿಡುವುದು ಈ ನಿರ್ಮಾಣದ ಹಿಂದಿನ ಉದ್ದೇಶವಾಗಿತ್ತು ಎಂದು ಮೋದಿ ಹೇಳಿದರು.
ಇದೀಗ ಈ 100 ವರ್ಷಗಳಷ್ಟು ಹಳೆಯದಾದ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥ ಮತ್ತು ಕರ್ತವ್ಯ ಭವನಗಳನ್ನು ಭಾರತದ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾಗಿದೆ ಎಂಬ ಅಂಶದ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದರು.
ಪ್ರಧಾನಿ ನಿವಾಸದ ಉದ್ದಕ್ಕೂ ಇರುವ ರಸ್ತೆಯನ್ನು ರೇಸ್ ಕೋರ್ಸ್ ರಸ್ತೆ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರಪತಿ ಭವನಕ್ಕೆ ಹೋಗುವ ರಸ್ತೆಯನ್ನು ರಾಜಪಥ್ ಎಂದು ಕರೆಯಲಾಗುತ್ತಿತ್ತು. ಅದೆಲ್ಲವನ್ನೂ ಈಗ ಬದಲಾಯಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸೇವಾ ತೀರ್ಥ ಸಂಕೀರ್ಣವು ಪ್ರಧಾನ ಮಂತ್ರಿಗಳ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ಕ್ಯಾಬಿನೆಟ್ ಸಚಿವಾಲಯ ಹೊಂದಿದೆ. ಈ ಮೊದಲು ಇವೆಲ್ಲವೂ ವಿವಿಧ ಸ್ಥಳಗಳಲ್ಲಿ ಇದ್ದವು.
ಕರ್ತವ್ಯ ಭವನ-1 ಮತ್ತು 2 ಕಟ್ಟಡದಲ್ಲಿ ವಿವಿಧ ಸಚಿವಾಲಯಗಳಿವೆ. ಹಣಕಾಸು, ರಕ್ಷಣಾ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಾರ್ಪೊರೇಟ್ ವ್ಯವಹಾರ, ಶಿಕ್ಷಣ, ಸಂಸ್ಕೃತಿ, ಕಾನೂನು, ಮಾಹಿತಿ ಮತ್ತು ಪ್ರಸಾರ, ಕೃಷಿ ಮತ್ತು ರೈತರ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಮತ್ತು ಬುಡಕಟ್ಟು ವ್ಯವಹಾರಗಳ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳು ಈ ಕಟ್ಟಡದಲ್ಲಿವೆ.



