ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿ ಪ್ರವಾಸದ ವೇಳೆ ಸರಿಯಾದ ವ್ಯವಸ್ಥೆಗಳ ಕೊರತೆಯಿಂದ ಪಾಕಿಸ್ತಾನ ಹಾಕಿ ತಂಡವು ಸಂಕಷ್ಟಕರ ಪರಿಸ್ಥಿತಿಯನ್ನು ಎದುರಿಸಿದ ಘಟನೆ ಬೆಳಕಿಗೆ ಬಂದಿದೆ. ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಲ್ಲಿ ಭಾಗವಹಿಸಲು ಆಸ್ಟ್ರೇಲಿಯಾಗೆ ತೆರಳಿದ್ದ ಆಟಗಾರರು, ಕ್ಯಾನ್‌ಬೆರಾದಲ್ಲಿ ಹೋಟೆಲ್ ಬುಕ್ಕಿಂಗ್ ಸಮಸ್ಯೆಯಿಂದ ಗಂಟೆಗಟ್ಟಲೆ ಹೊರಗಡೆ ಕಾಯಬೇಕಾದ ಪರಿಸ್ಥಿತಿಗೆ ಸಿಲುಕಿದ್ದರು.
ತಂಡದ ಎಲ್ಲಾ ವ್ಯವಸ್ಥೆಗಳು ಮಾಡಲಾಗಿದೆ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್ ಅಧಿಕಾರಿಗಳು ಭರವಸೆ ನೀಡಿದ್ದರೂ, ಸ್ಥಳಕ್ಕೆ ಬಂದಾಗ ಹಣ ತಲುಪಿಲ್ಲ ಎಂಬುದು ಬಹಿರಂಗವಾಯಿತು. ದೀರ್ಘ ಪ್ರಯಾಣದ ಬಳಿಕ ಆಟಗಾರರಿಗೆ ವಿಶ್ರಾಂತಿ ಸಿಗದೆ ಸಂಕಷ್ಟ ಎದುರಾಯಿತು. ನಂತರ ಸೀಮಿತ ಸಂಖ್ಯೆಯ ಕೊಠಡಿಗಳನ್ನು ಒದಗಿಸಲಾಗಿದ್ದು, ಹಲವರು ಒಂದೇ ಕೊಠಡಿಯನ್ನು ಹಂಚಿಕೊಂಡರು.
ಮರುದಿನ ಹೋಬಾರ್ಟ್ನಲ್ಲಿ ನಡೆದ ಪಂದ್ಯದಲ್ಲಿ ಪಾಕ್ ತಂಡ ಆಸ್ಟ್ರೇಲಿಯಾ ವಿರುದ್ಧ 2–3 ಅಂತರದಿಂದ ಸೋಲನುಭವಿಸಿತು. ಈ ಘಟನೆ ಪಾಕಿಸ್ತಾನದ ಕ್ರೀಡಾ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಮತ್ತೊಮ್ಮೆ ತೋರಿಸಿದೆ.



