ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1000 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ಹಾವೇರಿ ನಗರದ ಹೊರವಲಯದ ಅಜ್ಜಯ್ಯ ದೇವಸ್ಥಾನದ ಆವರಣದಲ್ಲಿ ಬೃಹತ್ ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ ಆಯೋಜಿಸಲಾಗಿದೆ.
ರಾಜ್ಯದ 9 ಜಿಲ್ಲೆಗಳ ಸುಮಾರು ಒಂದು ಲಕ್ಷ ಕುಟುಂಬಗಳಿಗೆ ಭೂಮಿಯ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಸರ್ಕಾರವು ತನ್ನ ಪ್ರಮುಖ ಗ್ಯಾರಂಟಿಯೊಂದನ್ನು ಸಾಕಾರಗೊಳಿಸಿದೆ.
ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಿಂತಿರುವ ಭಂಗಿಯ ಆಕರ್ಷಕ ಪುತ್ಥಳಿಯನ್ನು ಸಮಾವೇಶದಲ್ಲಿ ಅನಾವರಣಗೊಳಿಸಲಾಯಿತು. ಗೊಟಗೋಡಿ ರಾಕ್ ಗಾರ್ಡನ್ ಮುಖ್ಯಸ್ಥ ದಾಸನೂರ್ ಅವರು ಈ ಪುತ್ಥಳಿಯನ್ನು ಕೊಡುಗೆಯಾಗಿ ನೀಡಿದ್ದು, ಸಿಎಂ ಮತ್ತು ಡಿಸಿಎಂ ಇಬ್ಬರೂ ಅವರನ್ನು ಅಭಿನಂದಿಸಿದರು.
ಸಿರಿಧಾನ್ಯಗಳ ನಾಮಫಲಕದ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ‘ಭೂ ಗ್ಯಾರಂಟಿ’ ಪುಸ್ತಕ ಬಿಡುಗಡೆ ಹಾಗೂ ಉತ್ತಮ ಕೆಲಸ ಮಾಡಿದ ತಹಶೀಲ್ದಾರ್‌ಗಳಿಗೆ ಸನ್ಮಾನ ಮಾಡಲಾಯಿತು.
ಸಮಾವೇಶದಲ್ಲಿ ಸಚಿವರಾದ ಸತೀಶ್ ಜಾರಕಿಹೋಳಿ, ಹೆಚ್.ಕೆ. ಪಾಟೀಲ್, ಶಿವಾನಂದ ಪಾಟೀಲ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಕಾರ್ಯಕ್ರಮದ ಭದ್ರತೆಗಾಗಿ 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.



