ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ವಿಧಾನ ಸಭಾ ಚುನಾವಣಾ ದಿನಗಳು ಹತ್ತಿರ ಬರುತ್ತಿದ್ದು, ಈ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ನೀಡುತ್ತಿರುವ ಹೇಳಿಕೆಗಳು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ.
ಮಣಿಶಂಕರ್ ಅಯ್ಯರ್, I.N.D.I.A ಕೂಟದ ನಾಯಕತ್ವವನ್ನು ಕಾಂಗ್ರೆಸ್ ತೊರೆದು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ಗೆ ನೀಡಬೇಕು ಎಂದು ಹೇಳಿದ್ದು, ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ವಿಪಕ್ಷಗಳ ಕೂಟವನ್ನು ಬಲಪಡಿಸಬೇಕಾದರೆ, ನಾಯಕತ್ವವನ್ನು ಸ್ಟಾಲಿನ್ ಅವರಿಗೆ ನೀಡಬೇಕು. ರಾಷ್ಟ್ರಮಟ್ಟದಲ್ಲಿ ಬಲವಾದ ನಾಯಕತ್ವ ಮತ್ತು ಕಾರ್ಯತಂತ್ರದ ಅಗತ್ಯವಿದೆ. ಯಾಕೆಂದರೆ ಸ್ಟಾಲಿನ್ ಘೋಷಣೆಗಳನ್ನು ಕೂಗುವ ಬದಲು ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾರೆ. ಆದ್ರೆ ರಾಹುಲ್ ಗಾಂಧಿ ಕೇವಲ ಘೋಷಣೆಪ್ರಿಯ. ಹೀಗಾಗಿ ಇಂಡಿಯಾ ಕೂಟದ ನಾಯಕತ್ವ ಸ್ಟಾಲಿನ್ಗೆ ನೀಡಿದರೆ, ರಾಹುಲ್ ಗಾಂಧಿ ಪ್ರಧಾನಿಯಾಗಲು ಅವರು ಅಡ್ಡಿಯಾಗುವುದಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಗಾಂಧಿ ನಾನೊಬ್ಬ ಪಕ್ಷದ ಸದಸ್ಯ ಎಂಬುದನ್ನು ಮರೆತಿದ್ದಾರೆ. ಆದ್ದರಿಂದ, ನಾನು ಗಾಂಧಿವಾದಿ. ನಾನು ನೆಹರೂವಾದಿ. ನಾನು ರಾಜೀವ್ವಾದಿ, ಆದರೆ ನಾನು ರಾಹುಲಿಯನ್ ಅಲ್ಲ ಎಂದರು.
ಇನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ರೌಡಿ ಎಂದು ಟೀಕಿಸಿದ ಅಯ್ಯರ್, ವೇಣುಗೋಪಾಲ್ ಅವರಂತಹ ರೌಡಿಯನ್ನು ರಾಹುಲ್ ಗಾಂಧಿಯ ಬಳಿ ಇರುವುದು ಪಕ್ಷದ ಸ್ಥಿತಿ ಏನಾಗುತ್ತದೆ ಎಂದು ನೀವು ಊಹಿಸಬಲ್ಲಿರಾ? ಎಂದು ಪ್ರಶ್ನಿಸಿದರು.
ಮಣಿಶಂಕರ್ ಅಯ್ಯರ್ ಅವರ ಸಂಚಲನಕಾರಿ ಹೇಳಿಕೆಗಳಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಇದು ಅವರು ವೈಯಕ್ತಿಕ ಹೇಳಿಕೆಗಳು. ಪಕ್ಷವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳುವ ಮೂಲಕ ಜಾರಿಕೊಂಡಿದೆ.



