ಹೊಸದಿಗಂತ ಡಿಜಿಟಲ್ ಡೆಸ್ಕ್:
2026 ರ ಚಾರ್ ಧಾಮ್ ಯಾತ್ರೆ ಸಮಯದಲ್ಲಿ ಹಲವು ಹೊಸ ರೂಲ್ಸ್ ಜಾರಿಗೆ ಬದರಿನಾಥ, ಕೇದಾರನಾಥ ದೇವಾಲಯ ಸಮಿತಿ (BKTC) ನಿರ್ಧರಿಸಿದ್ದು, ಅದರಲ್ಲಿ ಮುಖ್ಯವಾಗಿ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳ 70 ಮೀಟರ್ ಒಳಗೆ ಮೊಬೈಲ್ ಫೋನ್‌ಗಳನ್ನು ಸಂಪೂರ್ಣ ನಿಷೇಧಿಸಲಾಗುವುದು ಎಂದು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ BKTC ಅಧ್ಯಕ್ಷ ಹೇಮಂತ್ ದ್ವಿವೇದಿ, ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಮತ್ತು ಯಾತ್ರಿಕರಿಗೆ ಸುಗಮ ದರುಶನಕ್ಕೆ ವ್ಯವಸ್ಥೆ ಕಲ್ಪಿಸಲು ಈ ನಿರ್ಧಾರ ಮಾಡಲಾಗಿದ್ದು, ಜೊತೆಗೆ ದೇವಾಲಯಗಳ ಬಳಿ ಭಕ್ತರಿಗೆ ರೀಲ್‌ಗಳು ಅಥವಾ ವೀಡಿಯೊಗಳನ್ನು ಮಾಡಲು ಅನುಮತಿ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಭಕ್ತರು ದರುಶನಕ್ಕಾಗಿ ದೇವಾಲಯವನ್ನು ಪ್ರವೇಶಿಸುವ ಮೊದಲು ತಮ್ಮ ಮೊಬೈಲ್ ಫೋನ್‌ಗಳು ಮತ್ತು ಕ್ಯಾಮೆರಾಗಳನ್ನು ಹೊರಗೆ ಇಡಬೇಕು. ದೇವಾಲಯದಿಂದ ಹೊರಬಂದ ನಂತರ ಅವರು ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ದೇವಾಲಯದ ಹೊರಗೆ ತೆಗೆದುಕೊಳ್ಳಬಹುದು.
ಈ ನಿರ್ಧಾರದಿಂದ ಚಾರ್ ಧಾಮದ ಆಧ್ಯಾತ್ಮಿಕ ವಾತಾವರಣವನ್ನು ಕಾಪಾಡಲು ಸಹಾಯವಾಗಲಿದ್ದು, ಜೊತೆಗೆ ಯಾತ್ರಿಕರು ಫೋಟೋ ತೆಗೆಯುವುದಕ್ಕಿಂತ ಹೆಚ್ಚಾಗಿ ಪ್ರಾರ್ಥನೆ ಮತ್ತು ಭಕ್ತಿಯ ಮೇಲೆ ತಮ್ಮ ಮನಸನ್ನು ಕೇಂದ್ರೀಕರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅದೇ ರೀತಿ ಚಾರ್ ಧಾಮ ಯಾತ್ರೆ ಶುರುವಾಗುವ ಮೊದಲು ಯಾತ್ರಿಕರ ಅನುಕೂಲಕ್ಕಾಗಿ ಎಲ್ಲಾ ದೇವಾಲಯ ಸಮಿತಿಯ ವಿಶ್ರಾಂತಿ ಗೃಹಗಳನ್ನು ನವೀಕರಿಸಲಾಗುವುದು. ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್ ಮತ್ತು ಶೌಚಾಲಯಗಳ ವ್ಯವಸ್ಥೆಗಳನ್ನು ಬಲಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.



