ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಬಿಲ್ ಗೇಟ್ಸ್ ನೀಡಬೇಕಿದ್ದ ನಿಗದಿತ ಭಾಷಣ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆ. ಅವರ ಬದಲಿಗೆ ಗೇಟ್ಸ್ ಪ್ರತಿಷ್ಠಾನದ ಆಫ್ರಿಕಾ ಮತ್ತು ಭಾರತ ವಿಭಾಗದ ಅಧ್ಯಕ್ಷ ಅಂಕುರ್ ವೋರಾ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಫೆಬ್ರವರಿ 16ರಂದು ಆರಂಭವಾದ ಈ ಶೃಂಗಸಭೆಯ ಅಧಿಕೃತ ಜಾಲತಾಣದಲ್ಲಿ ಗೇಟ್ಸ್ ಹೆಸರು ಪ್ರಾರಂಭದಲ್ಲಿ ಕಾಣಿಸಿಕೊಂಡಿತ್ತು. ಆದರೆ ನಂತರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟಿದ್ದು ಚರ್ಚೆಗೆ ಕಾರಣವಾಯಿತು. ಇಂದು ಬೆಳಿಗ್ಗೆ 11.50ಕ್ಕೆ ಭಾರತ್ ಮಂಟಪದಲ್ಲಿ 12 ನಿಮಿಷಗಳ ಭಾಷಣ ನಿಗದಿಯಾಗಿತ್ತು. ಕಾರ್ಯಕ್ರಮದಲ್ಲಿ ಅನೇಕ ಜಾಗತಿಕ ನಾಯಕರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ:
ಶೃಂಗಸಭೆಯನ್ನು ಮುನ್ನಡೆಸುತ್ತಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗೇಟ್ಸ್ ಹಾಜರಾತಿ ಕುರಿತು ಸ್ಪಷ್ಟನೆ ನೀಡಿಲ್ಲ. ಇದೇ ವೇಳೆ ಅಮೆರಿಕದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಲ್ಲಿ ಗೇಟ್ಸ್ ಹೆಸರು ಪ್ರಸ್ತಾಪವಾಗಿರುವುದೇ ಈ ನಿರ್ಧಾರಕ್ಕೆ ಕಾರಣವಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಈ ಎಐ ಶೃಂಗಸಭೆ ಫೆಬ್ರವರಿ 20ರವರೆಗೆ ನಡೆಯಲಿದೆ. ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಹಾಗೂ ಓಪನ್ ಎಐ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.



