ಹೊಸದಿಗಂತ ತಿಪಟೂರು:
ನಗರದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು ಸಂಚು ರೂಪಿಸಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಫೆಬ್ರವರಿ 20ರ ಶನಿವಾರ ರಾತ್ರಿ ಸುಮಾರು 8:30ರ ವೇಳೆಗೆ ನಡೆದ ಈ ದಾಳಿಯಲ್ಲಿ ಬರೋಬ್ಬರಿ 9.065 ಕೆಜಿ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ತಿಪಟೂರು ನಗರದ ಕೋಡಿ ಸರ್ಕಲ್‌ನಿಂದ ತುರುವೆಕೆರೆಗೆ ಸಂಪರ್ಕಿಸುವ ರಸ್ತೆಯ ಸೇತುವೆ ಬಳಿ ಅಬಕಾರಿ ಗಸ್ತು ತಂಡ ಹೊಂಚು ಹಾಕಿತ್ತು. ಈ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ, ಆತನ ಬಳಿಯಿದ್ದ ಕೆಂಪು ಬಣ್ಣದ ಬ್ಯಾಗ್‌ನಲ್ಲಿ ಖಾಕಿ ಟೇಪ್‌ನಿಂದ ಸೀಲ್ ಮಾಡಲಾಗಿದ್ದ ಮೂರು ಪೊಟ್ಟಣಗಳು ಪತ್ತೆಯಾಗಿವೆ. ಇವುಗಳಲ್ಲಿ ಹೂವು, ಬೀಜ ಮತ್ತು ತೆನೆ ಮಿಶ್ರಿತ ಒಣ ಗಾಂಜಾ ಇರುವುದು ದೃಢಪಟ್ಟಿದೆ.
ಬಂಧಿತನನ್ನು ಉತ್ತರ ಪ್ರದೇಶದ ಅಜಂಘಡ್ ಮೂಲದ ಅಖಿಲೇಶ (34) ಎಂದು ಗುರುತಿಸಲಾಗಿದೆ. ಈತ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ತೋಟ ಬೇಂಗ್ರೆ ಎಂಬಲ್ಲಿ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಜಪ್ತಿ ಮಾಡಲಾದ ಗಾಂಜಾದ ಮಾರುಕಟ್ಟೆ ಮೌಲ್ಯ ಸುಮಾರು 4,50,525 ರೂಪಾಯಿಗಳು ಎಂದು ಅಂದಾಜಿಸಲಾಗಿದೆ.
ಆರೋಪಿಯ ವಿರುದ್ಧ 1985ರ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅಬಕಾರಿ ಉಪ ನಿರೀಕ್ಷಕ ಬಸವರಾಜ ಕರಕಣ್ಣವರ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಜಿ.ವಿ. ವಿಜಯಕುಮಾರ, ನಿರೀಕ್ಷಕ ಸುರೇಶ್ ಎಂ.ಎನ್., ಮುಖ್ಯ ಪೇದೆ ಶಿವಶಂಕರಯ್ಯ, ಪೇದೆ ಯತೀಶ ಎನ್.ಆರ್. ಹಾಗೂ ಚಾಲಕ ಮುನಿರಾಜು ಪಾಲ್ಗೊಂಡಿದ್ದರು.



