ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಲಿಫ್ಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಜನರು ಪರದಾಡುವ ಘಟನೆಗಳು ಹೆಚ್ಚಾಗುತ್ತಿವೆ. ದೊಡ್ಡವರೇ ಗಾಬರಿಯಾಗುವ ಇಂತಹ ಸನ್ನಿವೇಶದಲ್ಲಿ, ಪುಟ್ಟ ಬಾಲಕಿಯೊಬ್ಬಳು ತನ್ನ ಅಪ್ರತಿಮ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಇಬ್ಬರು ಕಂದಮ್ಮಗಳ ಪ್ರಾಣ ಉಳಿಸಿದ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
‘The Tatva’ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಇಬ್ಬರು ಪುಟ್ಟ ಮಕ್ಕಳು ಲಿಫ್ಟ್ ಒಳಗೆ ಹೋಗುತ್ತಿದ್ದಂತೆ ಅನಿರೀಕ್ಷಿತವಾಗಿ ಲಿಫ್ಟ್ ಸ್ಥಗಿತಗೊಂಡು ಬಾಗಿಲು ಮುಚ್ಚಿಕೊಳ್ಳುತ್ತದೆ. ಒಳಗಿದ್ದ ಮಕ್ಕಳು ಭಯಭೀತರಾಗುವ ಮೊದಲೇ ಹೊರಗಿದ್ದ ಬಾಲಕಿಯೊಬ್ಬಳು ಮಿಂಚಿನ ವೇಗದಲ್ಲಿ ಕಾರ್ಯಪ್ರವೃತ್ತಳಾಗುತ್ತಾಳೆ.
ಬಾಲಕಿ ಕಿಂಚಿತ್ತೂ ಎದರದೆ, ಲಿಫ್ಟ್ ಬಾಗಿಲು ಪೂರ್ತಿ ಮುಚ್ಚದಂತೆ ತನ್ನ ಕೈ ಮತ್ತು ಕಾಲನ್ನು ಅಡ್ಡವಿಟ್ಟು ಬಾಗಿಲನ್ನು ಹಿಡಿದಿಡುತ್ತಾಳೆ. ತಕ್ಷಣವೇ ಅಲ್ಲಿದ್ದ ಮಹಿಳೆಯರ ಸಹಾಯ ಪಡೆದು ಆ ಪುಟ್ಟ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ತರುವಲ್ಲಿ ಯಶಸ್ವಿಯಾಗುತ್ತಾಳೆ. ಬಾಲಕಿಯ ಈ ಅದ್ಭುತ ಧೈರ್ಯದ ಮುಂದೆ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವೊಂದು ತಪ್ಪಿದಂತಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಕಿಯ ಸಾಹಸಕ್ಕೆ ಕಾಮೆಂಟ್‌ಗಳ ಸುರಿಮಳೆಯೇ ಆಗುತ್ತಿದೆ. “ದೇವರ ರೂಪದಲ್ಲಿ ಬಂದು ಮಕ್ಕಳನ್ನು ರಕ್ಷಿಸಿದಳು ಈ ಪುಟ್ಟ ಬಾಲಕಿ” ಎಂದು ಒಬ್ಬರು ಶ್ಲಾಘಿಸಿದರೆ, “ಇಂತಹ ಧೈರ್ಯ ಎಲ್ಲ ಮಕ್ಕಳಲ್ಲೂ ಕಾಣಲು ಸಾಧ್ಯವಿಲ್ಲ” ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, “ಪೋಷಕರೇ ಎಚ್ಚರ.. ಮಕ್ಕಳನ್ನು ಲಿಫ್ಟ್ ಹತ್ತಿರ ಒಬ್ಬರೇ ಬಿಡಬೇಡಿ” ಎಂಬ ಎಚ್ಚರಿಕೆಯ ಸಂದೇಶಗಳೂ ಹರಿದುಬರುತ್ತಿವೆ.



