July 5, 2026
Sunday, July 5, 2026
spot_img

ಕಿಡಿಗೇಡಿಯ ಕೃತ್ಯಕ್ಕೆ ಚಿತ್ರದುರ್ಗ ಸ್ತಬ್ಧ: ಚಾಕು ಇರಿತದ ವಿರುದ್ಧ ರಸ್ತೆಗಿಳಿದ ಕಾರ್ಯಕರ್ತರು, ಬಂದ್ ಎಚ್ಚರಿಕೆ

ಹೊಸದಿಗಂತ ಚಿತ್ರದುರ್ಗ:

ಕೇವಲ ನೂರು ರೂಪಾಯಿ ವಿಚಾರಕ್ಕಾಗಿ ಶುರುವಾದ ಕ್ಷುಲ್ಲಕ ಜಗಳವೊಂದು ವಿಕೋಪಕ್ಕೆ ತಿರುಗಿ, ಮೊಬೈಲ್ ಅಂಗಡಿ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಬುಧವಾರ ಮಧ್ಯಾಹ್ನ ನಗರದ ಸಂತೆಹೊಂಡದ ಬಳಿ ಸಂಭವಿಸಿದೆ. ಹಲ್ಲೆಗೊಳಗಾದ ಯುವಕನನ್ನು ವಿಕ್ರಮ್ ಚೌಧರಿ ಎಂದು ಗುರುತಿಸಲಾಗಿದ್ದು, ಸದ್ಯ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಆರೋಪಿಯು ವಿಕ್ರಮ್ ಚೌಧರಿ ಅವರ ಅಂಗಡಿಯಲ್ಲಿ ಸ್ಕ್ರೀನ್ ಗಾರ್ಡ್ ಹಾಕಿಸಿಕೊಂಡಿದ್ದ ಎನ್ನಲಾಗಿದೆ. ಬುಧವಾರ ಮತ್ತೆ ಅಂಗಡಿಗೆ ಬಂದಿದ್ದ ಆತ, ಬೇರೆ ಬ್ರಾಂಡ್‌ನ ಸ್ಕ್ರೀನ್ ಗಾರ್ಡ್ ಹಾಕುವಂತೆ ಕೇಳಿದ್ದಾನೆ. ಈ ವೇಳೆ ವಿಕ್ರಮ್ ಅವರು ಹೆಚ್ಚುವರಿಯಾಗಿ 100 ರೂ. ಹಣ ಕೇಳಿದ್ದೇ ಈ ಘಟನೆಗೆ ಮೂಲ ಕಾರಣವಾಯಿತು. ಇದರಿಂದ ಕೆರಳಿದ ಆರೋಪಿ, ಏಕಾಏಕಿ ವಿಕ್ರಮ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುವಿನ ಆರೋಗ್ಯ ವಿಚಾರಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಮಾದಕ ದ್ರವ್ಯ ಸೇವನೆಯ ಶಂಕೆಯ ಬಗ್ಗೆ ತನಿಖೆಯ ನಂತರವಷ್ಟೇ ಸ್ಪಷ್ಟ ಮಾಹಿತಿ ನೀಡಲಾಗುವುದು,” ಎಂದು ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಜಿಲ್ಲಾಸ್ಪತ್ರೆ ಮುಂದೆ ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲೇ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, “ಆರೋಪಿಯನ್ನು ತಕ್ಷಣ ಬಂಧಿಸಬೇಕು, ಇಲ್ಲವಾದಲ್ಲಿ ಇಡೀ ಚಿತ್ರದುರ್ಗ ಬಂದ್ ಗೆ ಕರೆ ನೀಡಲಾಗುವುದು,” ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮುಖಂಡ ಅನಿತ್ ಕುಮಾರ್, ಮಂಡಲ ಅಧ್ಯಕ್ಷ ನಾಗರಾಜ್, ಶ್ರೀರಾಮಸೇನೆ ಮುಖ್ಯಸ್ಥ ಸುರೇಶ್‌ಬಾಬು ಸೇರಿದಂತೆ ಕೇಶವ್, ರುದ್ರೇಶ್, ದೀಪಕ್‌ರಾಜ್ ಹಾಗೂ ಇತರರು ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !