February 27, 2026
Friday, February 27, 2026
spot_img

ಬೀದರ್‌ನ ‘ಬಾಯಾರಿಕೆ’ ನೀಗಿಸದ ಸಿದ್ದರಾಮಯ್ಯ ಸರ್ಕಾರ: 24 ಟಿಎಂಸಿ ನೀರು ತೆಲಂಗಾಣ ಪಾಲು!

ವೆಂಕಟೇಶ್ ಮೊರಖಂಡಿಕರ ಬೀದರ್

ಹೊಸದಿಗಂತ ಬೀದರ್:

ಬಚಾವತ್ ಅವಾರ್ಡ್ ಅನ್ವಯ ಗೋದಾವರಿ ಮತ್ತು ಮಾಂಜರಾ ಜಲಾನಯನ ಪ್ರದೇಶದಿಂದ ಕರ್ನಾಟಕಕ್ಕೆ ಲಭ್ಯವಾಗಬೇಕಿದ್ದ 24 ಟಿಎಂಸಿ ನೀರು ಬಳಕೆಯಾಗದೆ ತೆಲಂಗಾಣದ ಪಾಲಾಗುತ್ತಿರುವುದು ಜಿಲ್ಲೆಯ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯ ಸರ್ಕಾರದ ವಿಳಂಬ ನೀತಿಯಿಂದಾಗಿ ಜಿಲ್ಲೆಯ ಕೃಷಿ ಮತ್ತು ಉದ್ಯೋಗದ ಹಿತಾಸಕ್ತಿಗಳು ಬಲಿಯಾಗುತ್ತಿವೆ ಎಂದು ರೈತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

೨೦೧೫ರಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಮೊಹಮ್ಮದ್ ಲೈಕೋದ್ದೀನ್ ಮತ್ತು ರೈತ ಸಂಘದ ಮುಖಂಡ ವಿಶ್ವನಾಥ ಪಾಟೀಲ ಕೌಠ ಅವರು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಗೋದಾವರಿ ಜಲಾನಯನ ಪ್ರದೇಶದಲ್ಲಿ ‘ಬ್ರಿಡ್ಜ್ ಕಂ ಬ್ಯಾರೇಜ್’ ನಿರ್ಮಿಸುವ ಮೂಲಕ 24 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು. ಆದರೆ, ಒಂದು ದಶಕ ಕಳೆದರೂ ಈ ಯೋಜನೆಗೆ ಚಾಲನೆ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಮೂರು ವರ್ಷಗಳಾಗುತ್ತಾ ಬಂದರೂ, ಸ್ವಪಕ್ಷೀಯ ನಾಯಕರ ಈ ಮಹತ್ವದ ಬೇಡಿಕೆಗೆ ಬೆಲೆ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತು ಪೌರಾಡಳಿತ ಸಚಿವ ರಹೀಂ ಖಾನ್ ಅವರು ಕ್ಯಾಬಿನೆಟ್‌ನಲ್ಲಾಗಲಿ ಅಥವಾ ಅಧಿವೇಶನದಲ್ಲಾಗಲಿ ಈ ಕುರಿತು ಧ್ವನಿ ಎತ್ತುತ್ತಿಲ್ಲ ಎಂದು ರೈತ ಮುಖಂಡ ವಿ.ಕೆ. ದೇಶಪಾಂಡೆ ಕಿಡಿಕಾರಿದ್ದಾರೆ. “ಜನರ ತೆರಿಗೆ ಹಣದಲ್ಲಿ ವೈಭವ ಪ್ರದರ್ಶಿಸುವ ಸಚಿವರಿಗೆ ಜಿಲ್ಲೆಯ ಹಕ್ಕಿನ ನೀರನ್ನು ತರಲು ಸಾಧ್ಯವಾಗದಿದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ” ಎಂದು ಅವರು ಸವಾಲು ಹಾಕಿದ್ದಾರೆ.

ಹಿರಿಯ ನಾಯಕ ದಿವಂಗತ ಭೀಮಣ್ಣ ಖಂಡ್ರೆ ಅವರು ಈ ಯೋಜನೆಗಾಗಿ ಜೀವಮಾನವಿಡೀ ಹೋರಾಟ ನಡೆಸಿದ್ದರು. ಆದರೆ ಇಂದು ಅವರ ಮಗ ಸಚಿವರಾಗಿ, ಮೊಮ್ಮಗ ಸಂಸದರಾಗಿದ್ದರೂ ಸರ್ಕಾರದ ಮೇಲೆ ಒತ್ತಡ ಹೇರಲು ವಿಫಲರಾಗಿರುವುದು ಭೀಮಣ್ಣ ಖಂಡ್ರೆ ಅವರ ಆತ್ಮಕ್ಕೆ ಮಾಡುತ್ತಿರುವ ಅವಮಾನ ಎಂದು ಎಂ.ಕೆ. ಪಾಟೀಲ್ ಹಾಗೂ ಶಿವಾಜಿ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.

ಮುಂಬರುವ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಾದರೂ ಗೋದಾವರಿ ಜಲಾನಯನ ಪ್ರದೇಶದ ಬ್ಯಾರೇಜ್ ಯೋಜನೆಗೆ ಅನುಮೋದನೆ ಮತ್ತು ಅನುದಾನ ಮೀಸಲಿಡಬೇಕು. ಇಲ್ಲದಿದ್ದರೆ ಸರ್ಕಾರವು ರೈತರ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ರೈತ ಸಂಘಟನೆಗಳು ಎಚ್ಚರಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !