Saturday, August 30, 2025

ಕ್ರಿಕೆಟ್ ಗೆ ಹೇಳ್ತಾರಾ ಗುಡ್ ಬೈ ಮೊಹಮ್ಮದ್ ಶಮಿ?: ಕೊನೆಗೂ ಮೌನ ಮುರಿದ ವೇಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಸುತ್ತ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಅನುಭವಿ ವೇಗಿ ಮೊಹಮ್ಮದ್ ಶಮಿ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸುತ್ತಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿತ್ತು. ಈ ರೂಮರ್ಸ್ ಕುರಿತಂತೆ ಮೊದಲ ಬಾರಿಗೆ ಶಮಿ ಮಾತನಾಡಿದ್ದಾರೆ.

ನನಗೆ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಯಾವುದೇ ಉದ್ದೇಶ ಸದ್ಯಕ್ಕಂತೂ ಇಲ್ಲ ಎಂದು ಶಮಿ ಸ್ಪಷ್ಟಪಡಿಸಿದ್ದಾರೆ. ನಾನು ನಿವೃತ್ತಿ ಹೊಂದಿದ್ರೆ ಯಾರಿಗೆ ಲಾಭ? ಕ್ರಿಕೆಟ್ ಆಡುವುದನ್ನು ಆನಂದಿಸುವವರೆಗೂ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತೇನೆ ಎಂದು ಹೇಳಿದ್ದಾರೆ.

ದೇಶೀಯ ಋತುವಿನ ಆರಂಭಿಕ ಪಂದ್ಯ ದುಲೀಪ್ ಟ್ರೋಫಿಯಲ್ಲಿ ಉತ್ತರ ವಲಯ ತಂಡದ ಪರ ಶಮಿ ಆಡಿದ್ದರು. ಈ ವರ್ಷ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡದ ಪರ ಮತ್ತು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು. ಆದರೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಶಮಿಯನ್ನು ಪರಿಗಣಿಸಿರಲಿಲ್ಲ.ಫಿಟ್ನೆಸ್ ಸಮಸ್ಯೆಯಿಂದಾಗಿ ಶಮಿಯನ್ನು ಪರಿಗಣಿಸಿಲ್ಲ ಎಂದು ವರದಿಯಾಗಿತ್ತು. ಇದರಿಂದಾಗಿ 34 ವರ್ಷದ ಶಮಿ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಇದೀಗ ಮಾತನಾಡಿದ ಅವರು, ನಾನು ನಿವೃತ್ತಿ ಹೊಂದದಿರುವುದರಿಂದ ಯಾರಿಗಾದರೂ ಸಮಸ್ಯೆ ಇದ್ದರೆ ಹೇಳಿ. ನಾನು ನಿವೃತ್ತಿ ಹೊಂದಿದರೆ ಯಾರಿಗೆ ಲಾಭ? ಕ್ರಿಕೆಟ್ ಬೇಸರವಾದಾಗ ನಿಲ್ಲಿಸುತ್ತೇನೆ. ತಂಡದಲ್ಲಿ ಆಯ್ಕೆಯಾದರೂ ಆಗದಿದ್ದರೂ ಆಡಲು ಅವಕಾಶ ಸಿಕ್ಕಾಗಲೆಲ್ಲಾ ಆಡುತ್ತೇನೆ. ಭಾರತ ತಂಡದಲ್ಲಿ ಆಯ್ಕೆಯಾಗದಿದ್ದರೆ ದೇಶೀಯ ಕ್ರಿಕೆಟ್ ಆಡುತ್ತೇನೆ. ಎಲ್ಲಾದರೂ ಕ್ರಿಕೆಟ್ ಆಡುತ್ತಲೇ ಇರುತ್ತೇನೆ. ಕ್ರಿಕೆಟ್ ಬೇಸರವಾದಾಗ ಮಾತ್ರ ನಿವೃತ್ತಿ ಬಗ್ಗೆ ಯೋಚಿಸುತ್ತೇನೆ ಎಂದು ಮೊಹಮ್ಮದ್ ಶಮಿ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತಕ್ಕಾಗಿ ಏಕದಿನ ವಿಶ್ವಕಪ್ ಗೆಲ್ಲುವುದು ನನ್ನ ದೊಡ್ಡ ಕನಸು. 2023 ರಲ್ಲಿ ನಾವು ಬಹಳ ಹತ್ತಿರ ಬಂದಿದ್ದೆವು. ಆದರೆ ಫೈನಲ್ ದಿನ ನಮ್ಮ ಪಾಲಿಗೆ ಅದೃಷ್ಟ ಇರಲಿಲ್ಲ. ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದಾಗ ಸ್ವಲ್ಪ ಭಯ ಇತ್ತು. ಆದರೆ ಅಭಿಮಾನಿಗಳ ಬೆಂಬಲ ಆತ್ಮವಿಶ್ವಾಸ ತುಂಬಿತ್ತು. ಆದರೆ ಫೈನಲ್‌ನಲ್ಲಿ ಅದೃಷ್ಟ ಕೈಕೊಟ್ಟಿತು ಎಂದು ಶಮಿ ಹೇಳಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯದ ಶಮಿ ಅಕ್ಟೋಬರ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.

ರಂಜಾನ್ ಸಮಯದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಎನರ್ಜಿ ಡ್ರಿಂಕ್ ಕುಡಿದಿದ್ದಕ್ಕೆ ಟೀಕೆಗಳಿಗೆ ಉತ್ತರಿಸಿದ ಭಾರತೀಯ ವೇಗಿ ಮೊಹಮ್ಮದ್ ಶಮಿ, ಅನಿವಾರ್ಯ ಸಂದರ್ಭಗಳಲ್ಲಿ ಉಪವಾಸ ಮುರಿಯಲು ಪವಿತ್ರ ಗ್ರಂಥದಲ್ಲಿಯೂ ಅವಕಾಶವಿದೆ. 42-45 ಡಿಗ್ರಿ ಉಷ್ಣಾಂಶದಲ್ಲಿ ನಾವು ಆಟ ಆಡುತ್ತೇವೆ. ಟೀಕಿಸುವವರು ಇದನ್ನೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಪವಿತ್ರ ಗ್ರಂಥದಲ್ಲಿಯೂ ಅನಿವಾರ್ಯ ಸಂದರ್ಭಗಳಲ್ಲಿ ಉಪವಾಸ ಮುರಿಯಬಹುದು, ನಂತರ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ನಾನು ಅದನ್ನು ಮಾಡುತ್ತೇನೆ. ಕೆಲವರು ಪ್ರಸಿದ್ಧಿಗಾಗಿ ಟೀಕಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಟ್ರೋಲ್‌ಗಳು ಮತ್ತು ಕಾಮೆಂಟ್‌ಗಳನ್ನು ನಾನು ಈಗ ಗಮನಿಸುವುದಿಲ್ಲ ಎಂದು ಶಮಿ ಹೇಳಿದರು.

ರಂಜಾನ್ ಉಪವಾಸದ ಸಮಯದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದ ವೇಳೆ ಶಮಿ ಎನರ್ಜಿ ಡ್ರಿಂಕ್ ಕುಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಕಾರಣವಾಗಿತ್ತು.

ಇದನ್ನೂ ಓದಿ