ಹೊಸದಿಗಂತ ಡಿಜಿಟಲ್ ಡೆಸ್ಕ್:
ರವಿಶಂಕರ್ ಗುರೂಜಿ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು, ಉಕ್ರೇನ್‌ನ ಯುದ್ಧದಿಂದ ಆಘಾತಕ್ಕೊಳಗಾಗಿರುವ ಅಲ್ಲಿನ ಸೈನಿಕರ ಜೊತೆ ನಿಂತಿದೆ. ಭರವಸೆ, ಸುಧಾರಣೆ ಮತ್ತು ಅವರ ಉಸಿರಾಟದ ಪ್ರಕ್ರಿಯೆಗಳೊಂದಿಗೆ ಅವರನ್ನು ಆ ಆಘಾತದಿಂದ ಹೊರಗೆ ಕರೆತರಲು ಪ್ರಯತ್ನಿಸುತ್ತಿದೆ.
ಉಕ್ರೇನಿಯನ್ ಸೇನಾ ಅಧಿಕಾರಿಗಳು ಮೊದಲ ಬಾರಿಗೆ ಆರ್ಟ್ ಆಫ್ ಲಿವಿಂಗ್ ಆಘಾತ-ಪರಿಹಾರ ಶಿಬಿರಕ್ಕೆ ಕಾಲಿಟ್ಟಾಗ ಆ ದೃಶ್ಯ ಭಯಾನಕವಾಗಿತ್ತು. “ಅವರನ್ನು ನೋಡಿ ನನ್ನ ಹೃದಯ ಕುಗ್ಗಿಹೋಯಿತು. ಅವರ ಕೈಗಳು, ಕಾಲುಗಳು ಮತ್ತು ಬೆನ್ನಿನಲ್ಲಿ ಗಾಯಗಳಾಗಿದ್ದವು. ಅವರ ಕಣ್ಣುಗಳಲ್ಲಿನ ಭಯ ಮತ್ತು ಶೂನ್ಯತೆಯ ಭಾವ ನನ್ನ ಮೇಲೆ ಭಾರ ಹೇರಿತು” ಎಂದು ಆರ್ಟ್ ಆಫ್ ಲಿವಿಂಗ್ ಶಿಕ್ಷಕರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ನಂತರ ಅವರು ಆರ್ಟ್ ಆಫ್ ಲಿವಿಂಗ್‌ನ ಉಸಿರಾಟದ ಪ್ರಕ್ರಿಯೆ ಮತ್ತು ಧ್ಯಾನವನ್ನು ಕಲಿತ ಮೇಲೆ, ಅಸಾಮಾನ್ಯ ರೀತಿಯಲ್ಲಿ ಅವರಲ್ಲಿ ಸುಧಾರಣೆ ಕಾಣತೊಡಗಿತು. ಇದೇ ಅಧಿಕಾರಿಗಳು ಶಿಬಿರದ ನಂತರ ತಾವು “ಶಾಂತಿ, ವಿಶ್ರಾಂತಿ, ಸುರಕ್ಷಿತ ಮತ್ತು ಕೇಂದ್ರೀಕೃತವಾದ ಭಾವನೆಗಳನ್ನು ಅನುಭವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲಿನ ಜನರಲ್ಲಿ ಯುದ್ಧದ ಗೋಚರ ಪರಿಣಾಮಗಳಾದ ಶೂನ್ಯತೆ, ಕೋಪ ಮತ್ತು ದುಃಖ ಕಡಿಮೆಯಾಗಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.