ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸಿಎಂ ಶಿವಕುಮಾರ್ ಅವರ ಮೇಲೆ ಕಣ್ಣಿಡೋಕೆ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಇವರ ಆರೋಪ ತಾ ಕಳ್ಳ ಇತರರ ನಂಬ ಎಂಬ ಗಾದೆಯ ರೀತಿ ಅತೃಪ್ತ ಆತ್ಮಗಳಂತೆ ಹತಾಶೆಯಿಂದ ಹೇಳಿಕೆ ನೀಡ್ತಿದ್ದಾರೆ ಎಂದು ಸಿಎಂ ಟೀಕಿಸಿದ್ದಾರೆ.
ಕಾಂಗ್ರೆಸ್ ಸರಕಾರದ ವರ್ಚಸ್ಸನ್ನು ಹಾಳುಗೆಡವಲು ಯತ್ನ. ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ ಎಂದಿದ್ದಾರೆ.
ಆರೋಪ ಮಾಡಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಇನ್ನೊಬ್ಬರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದವರು. ಅವರ ಕಾಲದಲ್ಲಿ ಕೂಡಾ ಗುಪ್ತಚರ ವಿಭಾಗ ಮುಖ್ಯಮಂತ್ರಿಯವರ ಬಳಿಯೇ ಇತ್ತು. ಅವರ ಹೇಳಿಕೆಗಳನ್ನು ಗಮನಿಸಿದರೆ ಇವರಿಬ್ಬರೂ ತಮ್ಮ ಅನುಭವದ ಬಲದಿಂದಲೇ ಈ ಆರೋಪ ಮಾಡುತ್ತಿರುವಂತೆ ಕಾಣಿಸುತ್ತಿದೆ ಎಂದಿದ್ದಾರೆ.



