March 3, 2026
Tuesday, March 3, 2026
spot_img

ಖಮೇನಿ ಹತ್ಯೆಯ ಕುರಿತು ಭಾರತ ಸರ್ಕಾರ ಮೌನ ಯಾಕೆ? ಸೋನಿಯಾ ಗಾಂಧಿ ಟೀಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸುತ್ತಾ, ಭಾರತ ಸರ್ಕಾರದ ಮೌನವನ್ನು ಪ್ರಶ್ನಿಸಿದ್ದಾರೆ.

ಖಮೇನಿ ಹತ್ಯೆಗೆ ಭಾರತದ ಮೌನ ತಟಸ್ಥ ನಿಲುವಲ್ಲ, ಅದು ಹೊಣೆಗಾರಿಕೆಯಿಂದ ಹಿಂದೆ ಸರಿಯುವ ಮನಸ್ಥಿತಿಯಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ, ಹಲವು ಸಂದರ್ಭಗಳಲ್ಲಿ ಇರಾನ್ , ಭಾರತಕ್ಕೆ ನೆರವಾದ ವಿಷಯವನ್ನು ಅವರು ಮೋದಿ ಸರ್ಕಾರಕ್ಕೆ ನೆನಪಿಸಿದ್ದಾರೆ.

ಇದು ಭಾರತದ ವಿದೇಶಾಂಗ ನೀತಿಯ ದಿಕ್ಕು ಮತ್ತು ವಿಶ್ವಾಸಾರ್ಹತೆ ಕುರಿತು ಗಂಭೀರ ಸಂದೇಹವನ್ನು ಹುಟ್ಟುಹಾಕುತ್ತದೆ. ಬಜೆಟ್ ಅಧಿವೇಶನದ ಎರಡನೇ ಭಾಗಕ್ಕಾಗಿ ಸಂಸತ್ತು ಅಧಿವೇಶನ ಈ ತಿಂಗಳು ಮತ್ತೆ ನಡೆಯಲಿದ್ದು, ಅಂತಾರಾಷ್ಟ್ರೀಯ ವ್ಯವಸ್ಥೆಯ ಕುಸಿತದ ಬಗ್ಗೆ ಸರ್ಕಾರದ ಕಳವಳಕಾರ ಮೌನವನ್ನು ಮುಕ್ತವಾಗಿ ಚರ್ಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಖಮೇನಿ ಅವರ ಸಾವಿನ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಸಂಯಮ ಮತ್ತು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಕರೆ ನೀಡಿದೆ. ಈ ನಿಲುವು ಜಗತ್ತಿನ ಪ್ರಮುಖ ಶಕ್ತಿಗಳ ಪ್ರತಿಕ್ರಿಯೆಯನ್ನೇ ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಮಾರ್ಚ್ 1ರಂದು ಇರಾನ್ ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಹೊಸೇನಿ ಖಮೇನಿ ಅವರನ್ನು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ದೃಢಪಡಿಸಿತು. ಮಾತುಕತೆಗಳ ಮಧ್ಯೆ ಇರಾನ್‍ನ ಮುಖ್ಯಸ್ಥರ ಹತ್ಯೆಯು ಸಮಕಾಲೀನ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಗಂಭೀರ ಬಿರುಕು ಮೂಡಿಸುತ್ತದೆ ಎಂದು ಸೋನಿಯಾ ಗಾಂಧಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ-ಇಸ್ರೇಲ್‌ಗಳ ಬೃಹತ್ ದಾಳಿಯನ್ನು ನಿರ್ಲಕ್ಷಿಸಿ,ಯುಎಇ ಮೇಲೆ ಇರಾನ್ ನಡೆಸಿದ ಪ್ರತೀಕಾರದ ದಾಳಿಯನ್ನು ಖಂಡಿಸುವುದಕ್ಕೆ ಮಾತ್ರ ಸೀಮಿತರಾದರು. ಆದರೆ, ಹಿಂದಿನ ದಾಳಿಗಳನ್ನು ಉಲ್ಲೇಖಿಸಲಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಹೇಳಿದ್ದಾರೆ.

ಭಾರತವು ಬಹುಕಾಲದಿಂದ ವಸುಧೈವ ಕುಟುಂಬಕಂ- ಜಗತ್ತು ಒಂದು ಕುಟುಂಬ ಎಂಬ ಆದರ್ಶವನ್ನು ಮುಂದಿಟ್ಟುಕೊಂಡಿದೆ. ನಿಯಮಾಧಾರಿತ ಜಾಗತಿಕ ವ್ಯವಸ್ಥೆ ಒತ್ತಡಕ್ಕೆ ಒಳಗಾಗಿರುವ ಸಂದರ್ಭಗಳಲ್ಲಿ ಮೌನವಾಗಿರುವುದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಮಾನ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !